ಕೋಲ್ಕತಾ: ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಹರಿಂಘಾಟಾ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕಪಿಲೇಶ್ವರ್ ಸಂತೋಷ್ ಪುರ್ ನ ಟೀ ಸ್ಟಾಲ್ ಸಮೀಪ ಸಂಜಯ್ ದಾಸ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರಾಣಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ವಿಎಸ್ ಆರ್ ಅನಂತ್ ನಾಗ್ ತಿಳಿಸಿದ್ದಾರೆ.
ಹರಿಂಘಾಟಾ ಮುನ್ಸಿಪಾಲ್ಟಿಯ ವಾರ್ಡ್ ನಂಬರ್ 10ರ ಬಿಜೆಪಿ ಅಧ್ಯಕ್ಷರಾಗಿದ್ದ ಸಂಜಯ್ ದಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಸ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವಿವರಿಸಿದ್ದಾರೆ.
ಈ ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳ ಕೈವಾಡ ಇದ್ದಿರುವುದಾಗಿ ಬಿಜೆಪಿ ಆರೋಪಿಸಿದೆ. ಆದರೆ ಆರೋಪವನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಿರಾಕರಿಸಿದ್ದು, ಇದು ಗುಂಪು ಘರ್ಷಣೆಯಲ್ಲಿ ನಡೆದ ಘಟನೆಯಾಗಿದೆ ಎಂದು ದೂರಿದೆ.
ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಗುಂಡು ಸೊಂಟಕ್ಕೆ ತಗುಲಿರುವುದಾಗಿ ಸಂಜಯ್ ದಾಸ್ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ದಾಸ್ ತಂದೆ ಪೊಲೀಸರಿಗೆ ದೂರು ನೀಡಿದ್ದು, ಹಲವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.