Advertisement

ಕರಾವಳಿಯ ವಿಧಾನಸಭಾ ಚುನಾವಣೆಗೆ ಈಗ ಕಾವು ಬಂದಿದೆ. ಒಟ್ಟು 13 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈಗಾಗಲೇ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಪಟ್ಟಿ ಇದುವರೆಗೂ ಘೋಷಿತವಾಗಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ದಿನ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೊಡಕಾಗುತ್ತಿದೆ ಎಂಬ ಆತಂಕ ಪಕ್ಷದ ಕಾರ್ಯಕರ್ತರಲ್ಲಿತ್ತು. ಕಾಂಗ್ರೆಸ್‌ನ ಘೋಷಿತ ಆಭ್ಯರ್ಥಿಗಳು ಈಗಾಗಲೇ ಪ್ರಚಾರದಲ್ಲಿ ತೊಡಗಿಕೊಂಡಿದ್ದುದೂ ಆತಂಕಕ್ಕೆ ಕಾರಣವಾಗಿತ್ತು. ಆದರೆ ಬಿಜೆಪಿಯು ಮಂಗಳವಾರ ಮೊದಲನೇ ಪಟ್ಟಿಯಲ್ಲೇ ಬೈಂದೂರು ಹೊರತುಪಡಿಸಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಕಾಂಗ್ರೆಸ್‌ಗಿಂತ ಒಂದು ಹಂತ ಮುಂದಕ್ಕೆ ನುಗ್ಗಿದೆ. ಮಂಗಳವಾರ ಘೋಷಿತವಾದ ಬಿಜೆಪಿ ಅಭ್ಯರ್ಥಿಗಳ ಕಿರು ಪರಿಚಯ ಇಲ್ಲಿದೆ.

Advertisement

ವೇದವ್ಯಾಸ ಕಾಮತ್‌
2018ರ ವಿಧಾನಸಭೆಯಲ್ಲಿ ಹೊಸಮುಖವಾಗಿ ಮಂಗಳೂರು ನಗರ ದಕ್ಷಿಣದಿಂದ ಸ್ಪರ್ಧಿಸಿ ಶಾಸಕರಾದವರು. ಚಿಕ್ಕಂದಿನಲ್ಲೇ ಆರ್‌ಎಸ್‌ಎಸ್‌ ಸೇರಿ ಶಿಸ್ತು ಕಲಿತವರು. ಬಿಕಾಂ ಪದವೀಧರ. ಮೂಲತಃ ಉದ್ಯಮಿಯಾದ ಅವರು, ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ಸ್ಥಾಪಿಸಿ, ಅದರ ಮೂಲಕ ಸಾಕಷ್ಟು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರು. ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷರಾಗಿದ್ದವರು. ಸಮಾಜ ಸೇವೆ, ಧಾರ್ಮಿಕ, ಸಾಮಾಜಿಕ- ಸಂಘಟನೆಗಳಲ್ಲಿ ಸಕ್ರಿಯ.

ಡಾ| ವೈ. ಭರತ್‌ ಶೆಟ್ಟಿ
ಮೂಲತಃ ಕುಂದಾಪುರ ಮೂಲದ ಯಡ್ತೆರೆ ಕುಟುಂಬಕ್ಕೆ ಸೇರಿದವರು. ದಂತ ವೈದ್ಯರಾದ ಅವರು, ಎ.ಜೆ. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಭಾರತೀಯ ದಂತ ವೈದ್ಯಕೀಯ ಪರಿಷತ್‌ನ ಉಪಾಧ್ಯಕ್ಷರೂ, ಇಂಡಿಯನ್‌ ಡೆಂಟಲ್‌ ಅಸೋಸಿಯೇಶನ್‌ ಅಧ್ಯಕ್ಷರೂ ಆಗಿದ್ದರು. ಕೆಲವು ವರ್ಷ ಕಾಲ ಜೆಡಿಎಸ್‌ನಲ್ಲಿ ಗುರುತಿಸಿ ಕೊಂಡಿದ್ದರು. ಬಳಿಕ ಬಿಜೆಪಿಗೆ  2 009ರಲ್ಲಿ ಸೇರಿದರು. ಮಂಗಳೂರು ನಗರ ಉತ್ತರದ ಅಧ್ಯಕ್ಷರಾದರು. 2018ರಲ್ಲಿ ಅದೇ ಕ್ಷೇತ್ರದಿಂದ ಶಾಸಕರಾದರು.

ಸತೀಶ್‌ ಕುಂಪಲ
ಉಳ್ಳಾಲ ಸೋಮೇಶ್ವರ ನಿವಾಸಿ ಸತೀಶ್‌ ಕುಂಪಲ ವೃತ್ತಿಯಲ್ಲಿ ಖಾಸಗಿ ಗುತ್ತಿಗೆದಾರರು. ಪ್ರಸ್ತುತ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದು, ಬಿಜೆಪಿಯಲ್ಲಿ 1987ರಿಂದ ಬೂತ್‌ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡವರು. ಕುಂಪಲ ಬೂತ್‌ ಪ್ರಧಾನ ಕಾರ್ಯದರ್ಶಿಯಾಗಿ, ಸೋಮೇಶ್ವರ ಗ್ರಾಮದ ಪ್ರಧಾನ ಕಾರ್ಯದರ್ಶಿಯಾಗಿ, ಉಳ್ಳಾಲ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2 ಬಾರಿ ಸೋಮೇಶ್ವರ ಗ್ರಾ.ಪಂ. ಸದಸ್ಯ, ಜಿ.ಪಂ. ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉಮಾನಾಥ ಕೋಟ್ಯಾನ್‌
ಮೂಲತಃ ಬಂಟ್ವಾಳದವರಾದ ಉಮಾನಾಥ ಕೋಟ್ಯಾನ್‌ ಚಿಕ್ಕಂದಿನಲ್ಲೇ ಆರೆಸ್ಸೆಸ್‌ನಲ್ಲಿ ಗುರುತಿಸಿಕೊಂಡವರು. ಬಿಕಾಂ ಪದವೀಧರ, ವೃತ್ತಿಯಲ್ಲಿ ಉದ್ಯಮಿ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದವರು. 2013ರಲ್ಲೇ ಮೂಡುಬಿದಿರೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರೂ, 2018ರಲ್ಲಿ ಗೆಲುವು ಸಾಧಿಸಿ ಶಾಸಕರಾದರು. 2011ರಿಂದ 2014ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

ರಾಜೇಶ್‌ ನಾಯ್ಕ ಉಳಿಪಾಡಿಗುತ್ತು
ಬಂಟ್ವಾಳ ಕ್ಷೇತ್ರದಿಂದ ರಾಜೇಶ್‌ ನಾಯ್ಕ ಉಳಿಪಾಡಿಗುತ್ತು ಅವರದ್ದು 3ನೇ ಬಾರಿಯ ಸ್ಪರ್ಧೆ. ಕೃಷಿಕರು ಹಾಗೂ ಉದ್ಯಮಿ. 2013ರಲ್ಲಿ ಬಿಜೆಪಿ ಮೊದಲ ಬಾರಿಗೆ ಬಂಟ್ವಾಳ ದಿಂದ ಸ್ಪರ್ಧೆಗೆ ಅವಕಾಶ ನೀಡಿತ್ತು. ಆಗ ಸೋತಿದ್ದ ಅವರು 2018ರಲ್ಲಿ 2ನೇ ಬಾರಿಗೆ ಸ್ಪರ್ಧಿಸಿ ಶಾಸಕರಾದರು. ಒಟ್ಟು 3 ಬಾರಿ ಬಂಟ್ವಾಳ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಗಮನ ಸೆಳೆದಿರುವ ಅವರು ತಮ್ಮ ಒಡೂxರು ಫಾರ್ಮ್Õನಲ್ಲಿ 2022 ರಲ್ಲಿ ನಡೆಸಿದ ಕಮಲೋತ್ಸವ ಕಾರ್ಯಕ್ರಮ ಬಿಜೆಪಿಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.

ಸುರೇಶ್‌ ಶೆಟ್ಟಿ ಗುರ್ಮೆ
ಸುರೇಶ್‌ ಶೆಟ್ಟಿ ಗುರ್ಮೆಯವರಿಗೂ ಇದು ಮೊದಲ ಅವಕಾಶ. ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾಗಿರುವ ಅವರು ಗುರ್ಮೆ ಫೌಂಡೇಶನ್‌ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇಂಟರ್‌ನ್ಯಾಶನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ನ ಅಧ್ಯಕ್ಷರಾಗಿ, ಕರ್ನಾಟಕ ಹೊಟೇಲ್‌ ಮಾಲಕರ ಸಂಘದ ಉಪಾಧ್ಯಕ್ಷರಾಗಿ, ಶಿರ್ವ ವಿದ್ಯಾವರ್ಧಕ ಸೆಂಟ್ರಲ್‌ ಸ್ಕೂಲ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.ಕೈಗಾರಿಕೋದ್ಯಮಿ. ಬಿ.ಕಾಂ. ಪದವೀಧರರು.

ಕಿರಣ್‌ ಕುಮಾರ್‌ ಕೊಡ್ಗಿ
ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಆದರೆ ಪರಿಚಿತ ಮುಖ. ಕಾಂಗ್ರೆಸ್‌ನಲ್ಲಿ ಶಾಸಕರಾಗಿ, ಬಿಜೆಪಿಯಲ್ಲಿ ಹಣಕಾಸು ಆಯೋಗ ಅಧ್ಯಕ್ಷರಾಗಿದ್ದ ದಿ| ಎ.ಜಿ. ಕೊಡ್ಗಿ ಅವರ ಪುತ್ರ. ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದವರು. ಈಗ ಜಿಲ್ಲಾ ಕೋರ್‌ಸಮಿತಿಗೆ ವಿಶೇಷ ಆಹ್ವಾನಿತರು. ಇದು ಅವರ ಮೊದಲ ಚುನಾವಣೆ. ಕಾಂಗ್ರೆಸ್‌ ನಲ್ಲಿ ಇದ್ದಾಗ ಪ್ರತಾಪಚಂದ್ರ ಶೆಟ್ಟಿ ಅವರ ಪರವಾಗಿ, ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟರೊಂದಿಗೆ 1999ರಿಂದ ಚುನಾವಣೆಗಳಿಗೆ ಕೆಲಸ ಮಾಡಿದ್ದರು.

ಆಶಾ ತಿಮ್ಮಪ್ಪ ಗೌಡ
ಆಶಾ ತಿಮ್ಮಪ್ಪ ಗೌಡ (65) ಕಡಬ ತಾಲೂಕಿನ ಕುಂತೂರು ಗ್ರಾಮದವರು. ಪದವು ನಿವಾಸಿ ತಿಮ್ಮಪ್ಪ ಗೌಡರ ಪತ್ನಿ. ಎಸೆಸೆಲ್ಸಿ ವಿದ್ಯಾಭ್ಯಾಸ.  ನೆಲ್ಯಾಡಿ ಹಾಗೂ ಬೆಳ್ಳಾರೆಯಿಂದ ಜಿ.ಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಜಿ.ಪಂ. ಅಧ್ಯಕ್ಷೆಯಾಗಿದ್ದರು. ವಿಶೇಷ ಎಂದರೆ ಇವರು ಪೆರಾಬೆ ಗ್ರಾಮದಿಂದ ಬಿಜೆಪಿ ಯಿಂದ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ 2ನೇ ಅಭ್ಯರ್ಥಿ. ಈ ಹಿಂದೆ ಶಕುಂತಳಾ ಟಿ. ಶೆಟ್ಟಿ ಬಿಜೆಪಿಯಿಂದ ಬಂಟ್ವಾಳ, ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಯಶ್‌ಪಾಲ್‌ ಎ. ಸುವರ್ಣ
ಯಶ್‌ಪಾಲ್‌ ಎ. ಸುವರ್ಣರದ್ದು ಮೊದಲ ಬಾರಿಯ ಸ್ಪರ್ಧೆ. ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರು. ಉಡುಪಿ ನಗರಸಭೆ ಸದಸ್ಯರಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವಿಭಜಿತ ದ.ಕ. ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷರಾಗಿದ್ದಾರೆ. ಬಿ.ಕಾಂ., ಬಿ.ಐ.ಟಿ. ಪದವೀಧರರು.

ವಿ. ಸುನಿಲ್‌ ಕುಮಾರ್‌
ಎಂ.ಕೆ. ವಾಸುದೇವ ಹಾಗೂ ಕೆ.ಪಿ. ಪ್ರಮೋದ ದಂಪತಿ ಪುತ್ರರಾದ ಇವರು 1975ರಲ್ಲಿ ಜನಿಸಿದರು. ಪದವೀಧರ ಶಿಕ್ಷಣ ಪಡೆದು ಪತ್ರಕರ್ತರಾಗಿದ್ದವರು. ಸಂಘ ಶಿಕ್ಷಣ ಪಡೆದುಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಕಾರ್ಕಳ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾದರು. ಈ ವರೆಗೆ ಇದೇ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ್ದಾರೆ. ವಿಪಕ್ಷದ ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದ ಅವರು 2021ರಲ್ಲಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.

ಹರೀಶ್‌ ಪೂಂಜ
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹರೀಶ್‌ ಪೂಂಜಾ ರದ್ದು ಇದು 2ನೇ ಬಾರಿ ಸ್ಪರ್ಧೆ. ಗರ್ಡಾಡಿ ಮುತ್ತಣ್ಣ ಪೂಂಜ -ನಳಿನಿ ದಂಪತಿ ಪುತ್ರ. ಕಾನೂನು ಪದವೀಧರರಾಗಿದ್ದು, ಬೆಳ್ತಂಗಡಿ ತಾ| ಹೋರಾಟ ಪ್ರಮುಖ್‌, ತಾಲೂಕು ಪ್ರಮುಖ್‌, ದ.ಕ. ಜಿಲ್ಲಾ ಸಂಚಾಲಕ್‌, ರಾಜ್ಯ ಕಾರ್ಯ ಕಾರಿಣಿ ಹಾಗೂ ರಾಷ್ಟ್ರೀಯ ಕಾರ್ಯ ಕಾರಣಿ ಸದಸ್ಯರಾಗಿ ದ್ದವರು. ಪ್ರಸ್ತುತ ಯುವ ಮೋರ್ಚಾದ ದ.ಕ. ಜಿಲ್ಲಾಧ್ಯಕ್ಷರು.

ಭಾಗೀರಥಿ ಮುರುಳ್ಯ
ಭಾಗೀರಥಿ ಮುರುಳ್ಯ ಅವರದ್ದು ಮೊದಲ ಬಾರಿಯ ಸ್ಪರ್ಧೆ. ಸುಳ್ಯದಲ್ಲಿ ಮಹಿಳಾ ಆಭ್ಯರ್ಥಿಯ ಸ್ಪರ್ಧೆಯೂ ಇದೇ ಮೊದಲು. ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಹೈನುಗಾರಿಕೆ, ಟೈಲರಿಂಗ್‌ ವೃತ್ತಿ ನಿರ್ವಹಿಸುತ್ತಿದ್ದಾರೆ. ಮೊದಲಿಗೆ ಬೀಡಿ ಕಾರ್ಮಿಕರಾಗಿ, ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದಾರೆ. ರಾಷ್ಟ್ರ ಸೇವಿಕ ಸಮಿತಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದವರು. ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next