ದಾವಣಗೆರೆ: ವಿಜಯಪುರ ಶಾಸಕ ಯತ್ನಾಳ್ ಅವರು ಯಡಿಯೂರಪ್ಪ, ವಿಜಯೇಂದ್ರ ಅವರನ್ನ ಪದೆ ಪದೇ ಟೀಕೆ ಮಾಡುವುದರಿಂದ ದೊಡ್ಡ ಮಟ್ಟದ ನಾಯಕ ಆಗಬಹುದು ಎಂಬ ಹಗಲುಗನಸು ಕಾಣುವುದ ಬಿಡಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ದೊಡ್ಡ ನಾಯಕರ ಟೀಕೆ ಮಾಡು ವುದರಿಂದ ತಾವೂ ದೊಡ್ಡ ಮಟ್ಟದ ನಾಯಕರಾಗುತ್ತೇನೆ ಎಂಬ ಭ್ರಮಾಲೋಕದಲ್ಲಿರುವ ಅವರು ದೊಡ್ಡ ಮಟ್ಟದ ನಾಯಕನಾಗಲು ಸಾಧ್ಯವೇ ಇಲ್ಲ. ಗಲುಗನಸು,ಭ್ರಮಾಲೋಕದಿಂದ ಯತ್ನಾಳ್ ಹೊರ ಬರಬೇಕು ಎಂದು ಆಶಿಸಿದರು.
ನಮಗೂ ಯತ್ನಾಳ್ ಅವರಂತೆಯೇ ಏರುಧ್ವನಿಯಲ್ಲಿ ಮಾತನಾಡಲಿಕ್ಕೆ ಬರುತ್ತದೆ. ಯಡಿಯೂರಪ್ಪ ಅವರನ್ನ ಟೀಕೆ ಮಾಡುವುದರಿಂದ ದೊಡ್ಡ ನಾಯಕರಾಗಲು ಸಾಧ್ಯ ಇಲ್ಲ. ಪಕ್ಷದ ಸಂಘಟನೆಯಿಂದ ಮೇಲೆ ಬರಲಿ. ಯತ್ನಾಳ್ ಅವರನ್ನ ಬಿಜೆಪಿಗೆ ಕರೆತಂದು, ಸಚಿವರನ್ನಾಗಿ ಮಾಡಿದ್ದೇ ಯಡಿಯೂರಪ್ಪ ಅವರು. ಹಿಂದಿನ ಸರ್ಕಾರ ದಲ್ಲಿ ಮಂತ್ರಿ ಮಾಡಲಿಲ್ಲ ಎಂದು ಈಗಲೂ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಗತ್ಯವಾಗಿ ವಿಜಯೇಂದ್ರ ಅವರನ್ನ ಟೀಕೆ ಮಾಡುವುದರಿಂದ ಯತ್ನಾಳ್ ಅವರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ಆಗುವುದೂ ಇಲ್ಲ. ಅದು ಅವರಿಗೆ ಶೋಭೆಯೂ ಅಲ್ಲ. ಅವರ ವ್ಯಕ್ತಿತ್ವಕ್ಕೇ ಧಕ್ಕೆ ಆಗುತ್ತದೆ. ಯತ್ನಾಳ್ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾರೆ. ಅವರ ಹೊಂದಾಣಿಕೆ ರಾಜಕಾರಣ ಯಾರೊಂದಿಗೆ ಇದೆ ಎಂಬುದು ಎಲ್ಲವೂ ಗೊತ್ತಿದೆ. ನನ್ನ ಮತ್ತು ಯತ್ನಾಳ್ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಆದರೂ, ಅವರು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡುವುದೇಕೆ ಎಂದು ಪ್ರಶ್ನಿಸಿದರು.
ಪದೆ ಪದೇ ಪಕ್ಷದ ಮುಖಂಡರಾದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಟೀಕೆ ಮಾಡುವ ಮೂಲಕ ಮುಜುಗರ ತರುತ್ತಿರುವ ಯತ್ನಾಳ್ ಅವರಿಗೆ ತತ್ ಕ್ಷಣವೇ ನೋಟಿಸ್ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.