Advertisement

ಹರಿವಂಶ್‌ ಉಪಸಭಾಪತಿ: ಬಿ.ಕೆ. ಹರಿಪ್ರಸಾದ್‌ಗೆ ಸೋಲು

06:00 AM Aug 10, 2018 | |

ಹೊಸದಿಲ್ಲಿ: ಮುಂದಿನ ವರ್ಷದ ಮಹಾ ಸಮರಕ್ಕೂ ಮುನ್ನ ರಾಜಕೀಯ ಪಕ್ಷಗಳ ಹೊಂದಾಣಿಕೆ ಸಾಧ್ಯಾಸಾಧ್ಯತೆಗಳನ್ನೇ ಬದಲಿಸಬಲ್ಲ ಸುಳಿವು ನೀಡಿದ್ದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆದ್ದು ಬೀಗಿದೆ. ತನ್ನ ಅಂಗಪಕ್ಷ ಜೆಡಿಯುನ ಹರಿವಂಶ್‌ ನಾರಾಯಣ ಸಿಂಗ್‌ ಅವರನ್ನು ಗೆಲ್ಲಿಸಿಕೊಂಡಿರುವ ಬಿಜೆಪಿ, ಜತೆಗೆ ಇನ್ನೂ ಇಬ್ಬರು ಮಿತ್ರರನ್ನು ಸಂಪಾದಿಸಿಕೊಂಡಿದೆ. ಮುಂದಿನ ಲೋಕ ಸಮರದ ಅನಂತರ ಬಿಜೆಪಿ ಜತೆಗೆ ಹೆಜ್ಜೆ ಹಾಕುವ ಬಗ್ಗೆ ಸ್ವತಃ ತೆಲಂಗಾಣದ ಟಿಆರ್‌ಎಸ್‌ ಪಕ್ಷ ಸುಳಿವು ನೀಡಿದೆ. ಹೀಗಾಗಿ ಇದು ಬಿಜೆಪಿ ಪಾಲಿಗೆ ಭಾರೀ ಗೆಲುವು ಎಂದೇ ಬಿಂಬಿಸಲಾಗುತ್ತಿದೆ. ಎನ್‌ಡಿಎ ಅಭ್ಯರ್ಥಿ ಹರಿವಂಶ್‌ ಅವರು ಬಿಜೆಡಿ, ಟಿಆರ್‌ಎಸ್‌ ಮತ್ತು ಎಐಎಡಿಎಂಕೆ ಸದಸ್ಯರ ನೆರವಿನಿಂದ 125 ಮತ ಪಡೆದು ಗೆದ್ದರೆ, ಕಾಂಗ್ರೆಸ್‌ ಸದಸ್ಯ ಹಾಗೂ ಕರ್ನಾಟಕದ ಬಿ.ಕೆ.ಹರಿಪ್ರಸಾದ್‌ 101 ಮತ ಪಡೆದರು.

Advertisement

ತಪ್ಪು ಮಾಡಿದ ಸಂಸದರು 
ಉಪರಾಷ್ಟ್ರಪತಿ ಹಾಗೂ ಸಭಾಪತಿ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ 11.30ರ ಸುಮಾರಿಗೆ ಮತದಾನ ಪ್ರಕ್ರಿಯೆ ಶುರು ಮಾಡಿದರು. ಮೊದಲಿಗೆ ಮತಕ್ಕೆ ಹಾಕಿದಾಗ ಸಂಸದರೇ ಕೆಲವು ತಪ್ಪು ಮಾಡಿದರು. ಆಗ ಹರಿವಂಶ್‌ಗೆ 122 ಮತ್ತು ಹರಿಪ್ರಸಾದ್‌ಗೆ 98 ಮತಗಳು ಬಿದ್ದವು. ಹೀಗಾಗಿ ಮತ್ತೂಮ್ಮೆ ಮತ ಚಲಾವಣೆ ಮಾಡಲಾಯಿತು. 2ನೇ ಬಾರಿಗೆ ಮತಕ್ಕೆ ಹಾಕಿದಾಗ ಎನ್‌ಡಿಎ ಅಭ್ಯರ್ಥಿಗೆ 125, ಕಾಂಗ್ರೆಸ್‌ ಅಭ್ಯರ್ಥಿಗೆ 101 ಮತ ಬಿದ್ದವು. ಆದರೆ, ಕಾಂಗ್ರೆಸ್‌ ಹಾಗೂ ಎಸ್‌ಪಿಯ ತಲಾ ಮೂವರು, ಡಿಎಂಕೆ, ಟಿಎಂಸಿ, ಪಿಡಿಪಿಯ ತಲಾ ಇಬ್ಬರು ಹಾಗೂ ನಾಗಾ ಪೀಪಲ್ಸ್‌ ಫ್ರಂಟ್‌ನ ಒಬ್ಬ ಸದಸ್ಯ ಹಾಜರಾಗಲಿಲ್ಲ. ಇನ್ನು ವೈಎಸ್‌ಆರ್‌ಸಿಪಿಯ 2 ಸದಸ್ಯರು, ಎಎಪಿಯ 3 ಸದಸ್ಯರು ಇಡೀ ಪ್ರಕ್ರಿಯೆಯಿಂದ ದೂರ ಉಳಿದರು. ಎಐಎಡಿಎಂಕೆ, ಬಿಜೆಡಿ ಹಾಗೂ ಟಿಆರ್‌ಎಸ್‌ ಸದಸ್ಯರು ಬಿಜೆಪಿ ಅಭ್ಯರ್ಥಿ ಬೆಂಬಲಿಸಿದರು. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಹರಿಪ್ರಸಾದ್‌ಗೆ ಎಸ್‌ಪಿ, ಬಿಎಸ್‌ಪಿ, ಸಿಪಿಐ ಹಾಗೂ ಸಿಪಿಎಂ ಬೆಂಬಲ ಲಭ್ಯವಾಗಿತ್ತು..

ರಾಜ್ಯಸಭೆಗೆ ಆಗಮಿಸಿದ ಜೇಟ್ಲಿ
ಕಳೆದ ಮೇ ತಿಂಗಳಿನಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ವಿತ್ತ ಸಚಿವ ಅರುಣ್‌ ಜೇಟ್ಲಿ, ಗುರುವಾರ ಮೊದಲ ಬಾರಿಗೆ ರಾಜ್ಯಸಭೆಗೆ ಆಗಮಿಸಿದರು. ಜೇಟ್ಲಿ ಅನುಪಸ್ಥಿತಿಯಲ್ಲಿ ಹಣಕಾಸು ಖಾತೆಗೆ ಹಂಗಾಮಿಯಾಗಿ ಪಿಯೂಷ್‌ ಗೋಯೆಲ್‌ರನ್ನು ನೇಮಿಸಲಾಗಿತ್ತು. ಗುರುವಾರ ರಾಜ್ಯಸಭೆಗೆ ಆಗಮಿಸಿದ ಜೇಟ್ಲಿ ಮತದಾನದಲ್ಲಿ ಪಾಲ್ಗೊಂಡರು.

ಎಲ್ಲವೂ ಹರಿ ಕೃಪೆ ಎಂದ ಮೋದಿ
ಇಂದು ಎಲ್ಲವೂ ಹರಿ ಕೃಪೆಗೆ ಪಾತ್ರವಾಗಿದೆ. ನಾವೆಲ್ಲರೂ ಹರಿಯನ್ನೇ ನಂಬಿದ್ದೇವೆ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಹೆಸರು ಹರಿಯಿಂದಲೇ ಆರಂಭವಾಗುವುದನ್ನು ಉಲ್ಲೇಖೀಸಿ ಮಾತನಾಡಿದರು. ನನ್ನ ಪ್ರಕಾರ ನಮ್ಮ ಕಡೆಯವರಾಗಲೀ ಅಥವಾ ವಿಪಕ್ಷದವರಾಗಲೀ, ಎಲ್ಲರ ಮೇಲೂ ಹರಿಯ ಕೃಪೆ ಇರುತ್ತದೆ ಎಂದರು.

ಮೊದಲ ಬಾರಿ ಸದಸ್ಯತ್ವದಲ್ಲೇ ಉಪಸಭಾಪತಿ
62 ವರ್ಷದ ಹರಿವಂಶ್‌ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪತ್ರಕರ್ತರಾಗಿ ಕೆಲಸ ಮಾಡಿದ್ದ ಇವರು, ಮಾಜಿ ಪ್ರಧಾನಿ ಚಂದ್ರಶೇಖರ್‌ಗೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಸರಕಾರ ಉರುಳಿದ ಅನಂತರ ಪುನಃ ತಮ್ಮ ಪತ್ರಕರ್ತ ವೃತ್ತಿಗೆ ವಾಪಸಾಗಿದ್ದರು. ಉತ್ತರ ಪ್ರದೇಶದ ಬಲಿಯಾದಲ್ಲಿ ಜನಿಸಿದ ಹರಿವಂಶ್‌, ಅರ್ಥಶಾಸ್ತ್ರದಲ್ಲಿ ಎಂ.ಎ. ಹಾಗೂ ಬನಾರಸ್‌ ಹಿಂದೂ ವಿವಿಯಿಂದ ಪತ್ರಿಕೋದ್ಯಮ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ. 

Advertisement

ವಿಪಕ್ಷ ಒಗ್ಗೂಡಿಸುವಲ್ಲಿ ಕಾಂಗ್ರೆಸ್‌ ಸೋಲು
ಆರಂಭದಲ್ಲಿ ಸ್ವಪಕ್ಷದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸದೆ, ಇತರ ಪಕ್ಷದವರನ್ನೇ ಕಣಕ್ಕಿಳಿಸಿ ಬಿಜೆಪಿಯೇತರ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸಿ ಚುನಾವಣೆ ಎದುರಿಸಬೇಕು ಎಂದು ಹೊರಟಿದ್ದ ಕಾಂಗ್ರೆಸ್‌ ಕೊನೆಗೆ ತನ್ನ ಖೆಡ್ಡಾದಲ್ಲಿ ತಾನೇ ಬಿದ್ದಂತಾಗಿದೆ. ಮೊದಲಿಗೆ ಎನ್‌ಸಿಪಿಯ ವಂದನಾ ಚವಾಣ್‌ರನ್ನು ಕಣಕ್ಕಿಳಿಸುವ ಪ್ರಸ್ತಾವವಿತ್ತು. ಆದರೆ ಬಿಜೆಡಿ, ಎನ್‌ಸಿಪಿ, ಟಿಎಂಸಿ ಹಿಂದೆ ಸರಿಯುತ್ತಿದ್ದಂತೆಯೆ ತನ್ನದೇ ಪಕ್ಷದ ಬಿ.ಕೆ.ಹರಿಪ್ರಸಾದ್‌ರನ್ನು ಕಣಕ್ಕಿಳಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next