Advertisement

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

11:30 PM Apr 25, 2024 | Team Udayavani |

ಬೆಂಗಳೂರು: ಮೊದಲನೇ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನ ಇಂದು ಬೆಳಗ್ಗೆಯಿಂದಲೇ ಆರಂಭವಾಗಲಿದ್ದು, ಚುನಾವಣ ಆಯೋಗ ಹಾಗೂ ಆಯಾ ಜಿಲ್ಲಾಡಳಿತಗಳು ಸಕಲ ರೀತಿಯಿಂದ ಸನ್ನದ್ಧವಾಗಿವೆ.

Advertisement

ಸಿಬಂದಿ ಸನ್ನದ್ಧ:

ಗುರುವಾರ ಬೆಳಗ್ಗಿನಿಂದಲೇ ಮಸ್ಟರಿಂಗ್‌ ಕೇಂದ್ರಗಳಿಗೆ ತೆರಳಿದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬಂದಿ, ತಂತಮ್ಮ ಬೂತ್‌ಗೆ ಸಂಬಂಧಿಸಿದ ಮತಯಂತ್ರ (ಇವಿಎಂ), ವಿವಿ ಪ್ಯಾಟ್‌, ನಿಯಂತ್ರಣ ಘಟಕ (ಕಂಟ್ರೋಲ್‌ ಯುನಿಟ್‌)ಗಳೊಂದಿಗೆ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಭದ್ರತೆಗಾಗಿ ನಿಯುಕ್ತಿಗೊಂಡಿರುವ ಪೊಲೀಸರೂ ಗುರುವಾರ ರಾತ್ರಿ ವಾಸ್ತವ್ಯ ಹೂಡಿ ಚುನಾವಣ ಕಾರ್ಯಕ್ಕಾಗಿ ಶುಕ್ರವಾರ ಮುಂಜಾನೆಯಿಂದಲೇ ಸನ್ನದ್ಧರಾಗಿದ್ದಾರೆ.

ಮೊಬೈಲ್‌ ಕೊಂಡೊಯ್ಯುವಂತಿಲ್ಲ:

ಮತಗಟ್ಟೆಯೊಳಗೆ ಮೊಬೈಲ್‌ ಕೊಂಡೊಯ್ಯುವಂತಿಲ್ಲ ಎಂದು ಚುನಾವಣ ಆಯೋಗ ತಿಳಿಸಿದೆ. ಮತ ಚಲಾಯಿಸುವ ಸಂದರ್ಭದ ವೀಡಿಯೋ, ಫೋಟೋ ತೆಗೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಾರೆ. ಇದು ಚುನಾವಣ ಗೌಪ್ಯತೆಯ ಉಲ್ಲಂಘನೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಹಲವು ಮತದಾರರು ಈ ಚಾಳಿ  ಮುಂದುವರಿಸುವ ಸಾಧ್ಯತೆಯಿದೆ.  ಈ ಹಿನ್ನೆಲೆಯಲ್ಲಿ ಮತಗಟ್ಟೆಯೊಳಗೆ     ಮೊಬೈಲ್‌ ಫೋನ್‌ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಮತಗಟ್ಟೆ ಪ್ರವೇಶಕ್ಕೆ ಮುನ್ನ ಮತದಾರರ ತಪಾಸಣೆ ನಡೆಸಲಿದ್ದೇವೆ. ಮತದಾರರ ಬಳಿ ಮೊಬೈಲ್‌ ಇದ್ದರೆ ಮತ ಚಲಾವಣೆ ತನಕ ಅದನ್ನು ಮತಗಟ್ಟೆಯಲ್ಲಿ ತೆಗೆದಿಡಲು ವ್ಯವಸ್ಥೆ ಮಾಡಲಾಗುತ್ತದೆ. ಮೊಬೈಲ್‌ ಫೋನ್‌ ಇಡಲು ಟ್ರೇ ವ್ಯವಸ್ಥೆ ಕಲ್ಪಿಸಿ ಅದನ್ನು ಮತಗಟ್ಟೆ ಅಧಿಕಾರಿ ಅಥವಾ ಭದ್ರತಾ ಸಿಬಂದಿ ನಿಗಾದಲ್ಲಿ ಇಡುವಂತೆ ಚುನಾವಣ ಆಯೋಗ ಸೂಚನೆ ನೀಡಿದೆ.

Advertisement

ಯಾರಿಗೆ ಒಲಿಯಲಿದ್ದಾನೆ ಮತದಾರ? :

ಒಟ್ಟು 14 ಕ್ಷೇತ್ರಗಳ 247 ಅಭ್ಯರ್ಥಿಗಳ ಭವಿಷ್ಯವು ಇಂದು ರಾತ್ರಿಯೊಳಗೆ ಭದ್ರವಾಗಲಿದ್ದು, ಮತದಾರ ಯಾರಿಗೆ ಒಲಿಯುತ್ತಾನೆ ಎಂಬ ಕುತೂಹಲಕ್ಕೆ ಜೂ.4ರ ಮತ ಎಣಿಕೆ  ಬಳಿಕವಷ್ಟೇ ತೆರೆ ಬೀಳುತ್ತದೆ. ಕಳೆದ ಒಂದು ತಿಂಗಳಿಂದ ಅಭ್ಯರ್ಥಿ ಆಯ್ಕೆ, ಅಸಮಾಧಾನ ಶಮನ, ಮತದಾರರ ಮನ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದ ರಾಜಕೀಯ ನಾಯಕರಿಗೆ ವಿಶ್ರಾಂತಿ ಇಲ್ಲದಂತಾಗಿದೆ. ಎರಡನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳತ್ತ ಪ್ರಚಾರಕ್ಕೆ ತೆರಳಿದ್ದು, ಶುಕ್ರವಾರ ಇತ್ತ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದರೆ, ಅತ್ತ ಇನ್ನುಳಿದ 14 ಕ್ಷೇತ್ರಗಳಲ್ಲಿ ರಾಜಕೀಯ ಮುಖಂಡರು ಪ್ರಚಾರದ ಭರಾಟೆ ಜೋರಾಗಲಿದೆ.

ಚುನಾವಣೆ ನಡೆಯುವ ಕ್ಷೇತ್ರಗಳು:

ಕ್ಷೇತ್ರ  /ಕಾಂಗ್ರೆಸ್‌     /ಎನ್‌ಡಿಎ

ಉಡುಪಿ-ಚಿಕ್ಕಮಗಳೂರು /  ಜಯಪ್ರಕಾಶ್‌ ಹೆಗ್ಡೆ/  ಕೋಟ ಶ್ರೀನಿವಾಸ ಪೂಜಾರಿ

ಹಾಸನ/    ಶ್ರೇಯಸ್‌ ಪಟೇಲ್‌/  ಪ್ರಜ್ವಲ್‌ ರೇವಣ್ಣ (ಜೆಡಿಎಸ್‌)

ದಕ್ಷಿಣ ಕನ್ನಡ ಪದ್ಮರಾಜ್‌/   ಬ್ರಿಜೇಶ್‌ ಚೌಟ

ಚಿತ್ರದುರ್ಗ    /ಬಿ.ಎನ್‌. ಚಂದ್ರಪ್ಪ/ ಗೋವಿಂದ ಕಾರಜೋಳ

ತುಮಕೂರು/  ಮುದ್ದಹನುಮೇಗೌಡ/    ವಿ.ಸೋಮಣ್ಣ

ಮಂಡ್ಯ/    ಸ್ಟಾರ್‌ ಚಂದ್ರು  /ಎಚ್‌.ಡಿ. ಕುಮಾರಸ್ವಾಮಿ (ಜೆಡಿಎಸ್‌)

ಮೈಸೂರು   /ಎಂ.ಲಕ್ಷ್ಮಣ್‌  /ಯದುವೀರ್‌ ಒಡೆಯರ್‌

ಚಾಮರಾಜನಗರ   /ಸುನೀಲ್‌ ಬೋಸ್‌  /ಎಸ್‌.ಬಾಲರಾಜ್‌

ಬೆಂ.ಗ್ರಾಮಾಂತರ/   ಡಿ.ಕೆ. ಸುರೇಶ್‌/    ಡಾ| ಸಿ.ಎನ್‌. ಮಂಜುನಾಥ್‌

ಬೆಂಗಳೂರು ಉತ್ತರ   /ಪ್ರೊ| ರಾಜೀವ್‌ ಗೌಡ/  ಶೋಭಾ ಕರಂದ್ಲಾಜೆ

ಬೆಂಗಳೂರು ಕೇಂದ್ರ   /ಮನ್ಸೂರ್‌ ಅಲಿಖಾನ್‌/ ಪಿ.ಸಿ. ಮೋಹನ್‌

ಬೆಂಗಳೂರು ದಕ್ಷಿಣ/  ಸೌಮ್ಯಾ ರೆಡ್ಡಿ/  ತೇಜಸ್ವಿ ಸೂರ್ಯ

ಚಿಕ್ಕಬಳ್ಳಾಪುರ   /ರಕ್ಷಾ ರಾಮಯ್ಯ  ಡಾ| ಕೆ. ಸುಧಾಕರ್‌

ಕೋಲಾರ/  ಕೆ.ವಿ. ಗೌತಮ್‌/   ಮಲ್ಲೇಶ್‌ ಬಾಬು (ಜೆಡಿಎಸ್‌)

Advertisement

Udayavani is now on Telegram. Click here to join our channel and stay updated with the latest news.

Next