ಡೆಹ್ರಾಡೂನ್: ಗಣಿ ಮಾಫಿಯಾದ ಕುಳಗಳನ್ನು ಬೆನ್ನಟ್ಟಿ ಸೆರೆ ಹಿಡಿಯುವ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉತ್ತರಪ್ರದೇಶದ ಮೊರದಾಬಾದ್ ನ ಐವರು ಪೊಲೀಸರು ಗಾಯಗೊಂಡಿದ್ದು, ಬಿಜೆಪಿ ಮುಖಂಡರೊಬ್ಬರ ಪತ್ನಿ ಸಾವನ್ನಪ್ಪಿರುವ ಘಟನೆ ಗುರುವಾರ (ಅ.13) ಉತ್ತರಾಖಂಡ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್?: ವಿಭಿನ್ನ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು
ಗಣಿ ಮಾಫಿಯಾದ ಸಹಚರರು ಮತ್ತು ಉತ್ತರಪ್ರದೇಶ ಪೊಲೀಸರ ನಡುವಿನ ಗುಂಡಿನ ದಾಳಿ ವೇಳೆ ಉತ್ತರಾಖಂಡ್ ಬಿಜೆಪಿ ಮುಖಂಡ ಗುರ್ತಾಜ್ ಭುಲ್ಲರ್ ಪತ್ನಿ ಗುರ್ ಪ್ರೀತ್ ಕೌರ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಉತ್ತರಾಖಂಡ್ ನ ಜಸ್ಪುರ್ ನ ಗಣಿ ಮಾಫಿಯಾದ ಕುಳ ಜಾಫರ್ ಎಂಬಾತನನ್ನು ಬಂಧಿಸಲು ಉತ್ತರಪ್ರದೇಶದ ಮೊರದಾಬಾದ್ ಪೊಲೀಸರ ತಂಡ ಬೆನ್ನಟ್ಟಿ ಹೋದ ಸಂದರ್ಭದಲ್ಲಿ ಗುಂಡಿನ ಕಾಳಗ ನಡೆದಾಗ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಮೂವರು ಗಾಯಗೊಂಡಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಗಣಿ ಮಾಫಿಯಾದ ಜಾಫರ್ ತಲೆಗೆ 50,000 ಬಹುಮಾನ ಘೋಷಿಸಲಾಗಿತ್ತು. ಈತ ಬಿಜೆಪಿ ಮುಖಂಡ ಬುಲ್ಲರ್ ನಿವಾಸದಲ್ಲಿ ಅಡಗಿಕೊಂಡಿದ್ದಾನೆಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶ ಪೊಲೀಸ್ ವಿರುದ್ಧ ಕೊಲೆ ಪ್ರಕರಣ?
ಗುಂಡಿನ ಚಕಮಕಿಯಲ್ಲಿ ಬಿಜೆಪಿ ಮುಖಂಡ ಭುಲ್ಲರ್ ಪತ್ನಿ ಸಾವಿಗೀಡಾದ ಘಟನೆ ಬೆನ್ನಲ್ಲೇ ಆಕ್ರೋಶಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದು, ಮತ್ತೊಂದೆಡೆ ಉತ್ತರಾಖಂಡ್ ಪೊಲೀಸರು ಉತ್ತರಪ್ರದೇಶ ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ವರದಿ ತಿಳಿಸಿದೆ.