Advertisement

Siddaramaiah ರಾಜೀನಾಮೆ ನೀಡುವಂತೆ ಚೌಟ ಸಹಿತ ಬಿಜೆಪಿ ನಾಯಕರ ಆಗ್ರಹ

12:27 AM Sep 25, 2024 | Team Udayavani |

ಮಂಗಳೂರು: ಮುಡಾ ಭೂ ಹಗರಣದ ಬಗ್ಗೆ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರು ತತ್‌ಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಕ್ಯಾ|ಬ್ರಿಜೇಶ್‌ ಚೌಟ ಅವರು ಒತ್ತಾಯಿಸಿದ್ದಾರೆ.

Advertisement

ತಮ್ಮ ರಾಜಕೀಯ ಬದುಕು ಯಾವುದೇ ಕಪ್ಪುಚುಕ್ಕೆಗಳಿಲ್ಲದ ತೆರೆದ ಪುಸ್ತಕ ಎಂಬುದಾಗಿ ಇಷ್ಟುದಿನ ಹೇಳಿಕೊಂಡು ತಿರುಗಾಡುತ್ತಿದ್ದ ಸಿದ್ದರಾಮಯ್ಯನವರ ನಿಜ ಬಣ್ಣ ಈ ತೀರ್ಪಿನಿಂದ ಬಯಲಾಗಿದೆ. ಮುಡಾ ಹಗರಣದಲ್ಲಿ ಅಕ್ರಮ ಎಸಗಿರುವುದಕ್ಕೆ ಈ ತೀರ್ಪಿಗಿಂತ ದೊಡ್ಡ ಸಾಕ್ಷ್ಯ ಬೇರೆ ಬೇಕಿಲ್ಲ ಎಂದಿದ್ದಾರೆ.

ಸಿಎಂ ರಾಜೀನಾಮೆ ನೀಡಲಿ: ಕುಂಪಲ
ಸಿದ್ದರಾಮಯ್ಯ ಅವರ ಮೇಲಿನ ದೂರನ್ನು ಅಭಿಯೋಜನೆಗೆ ನೀಡಿರುವ ರಾಜ್ಯಪಾಲರ ಕ್ರಮ ಸಮರ್ಥನೀಯವಾಗಿದೆ. ಇದು ವಿಪಕ್ಷದ ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ನ್ಯಾಯವಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಹರ್ಷ ವ್ಯಕ್ತಪಡಿಸಿದರು.ತತ್‌ಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಎಂ ಸ್ಥಾನದ ಘನತೆಯನ್ನು ಎತ್ತಿ ಹಿಡಿಯಲಿ ಎಂದು ಅವರು ಆಗ್ರಹಿಸಿದರು.

ಹಿಂದೆಯೇ ಸಲಹೆ ನೀಡಿದ್ದೆ: ಪ್ರತಾಪ್‌ಸಿಂಹ
ಪುತ್ತೂರು: ಸಿಎಂ ಅವರು ಪತ್ನಿ ಹೆಸರಲ್ಲಿ ಮಾಡಿದ 14 ನಿವೇಶನವನ್ನು ತತ್‌ಕ್ಷಣ ಸರಕಾರಕ್ಕೆ ಹಸ್ತಾಂತರ ಮಾಡಬೇಕು. ಈ ಸಲಹೆಯನ್ನು ಹಿಂದೆಯೇ ಸಿದ್ದರಾಮಯ್ಯ ಅವರಿಗೆ ಹೇಳಿದ್ದರೂ ಅವರು ಅದನ್ನು ಸ್ವೀಕರಿಸಲಿಲ್ಲ. ಯಾರದೋ ಸಲಹೆಯನ್ನು ನೆಚ್ಚಿಕೊಂಡು ಕುಳಿತ ಕಾರಣ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಅಂದು ನಿವೇಶನಗಳನ್ನು ಹಸ್ತಾಂತರ ಮಾಡಿದ್ದರೆ, ಪಕ್ಷದ ಎಲ್ಲ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಸಿದ್ಧರಾಮಯ್ಯ ಅವರ ಸಿಎಂ ಪಟ್ಟ ಉಳಿಯುತಿತ್ತು. ಕಳಂಕದಿಂದ ಮುಕ್ತರಾಗುತ್ತಿದ್ದರು ಎಂದು ಪ್ರತಾಪ್‌ ಸಿಂಹ ಹೇಳಿದರು.

ಸಿದ್ದರಾಮಯ್ಯನವರೇ ನಿಮ್ಮ ಶತ್ರುಗಳು ನಿಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಬಿಜೆಪಿ-ಜೆಡಿಎಸ್‌ನಲ್ಲಿ ಇಲ್ಲ, ಅವರು ನಿಮ್ಮ ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದರು.

Advertisement

ಸಿಎಂ ರಾಜೀನಾಮೆಗೆ ಯಶ್‌ಪಾಲ್‌ ಆಗ್ರಹ
ಉಡುಪಿ: ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತತ್‌ಕ್ಷಣವೇ ರಾಜೀನಾಮೆ ಪಡೆಯಲಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಇಂತಹ ಪರಿಸ್ಥಿತಿಯಲ್ಲಿಯೂ ಅಧಿಕಾರದ ಆಸೆಯಿಂದ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡಲು ಮುಂದಾದರೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಸಿಎಂ ತತ್‌ಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಕಾಂಗ್ರೆಸ್‌ ಪಕ್ಷ ರಾಜೀನಾಮೆ ಪಡೆಯಲು ಮುಂದಾಗದಿದ್ದಲ್ಲಿ ಸದಾ ಸಂವಿಧಾನ, ನ್ಯಾಯಾಂಗ, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಭಾಷಣ ಮಾಡುವ ಪಕ್ಷದ ನಕಲಿ ಮುಖವಾಡ ಕಳಚಿ ಬೀಳಲಿದೆ ಎಂದು ತಿಳಿಸಿದ್ದಾರೆ.

ರಾಜೀನಾಮೆಗೆ ಪ್ರಮೋದ್‌ ಆಗ್ರಹ
ಉಡುಪಿ: ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪತ್ನಿ ಮತ್ತು ಮಗ ಡಾ| ಯತೀಂದ್ರ ನೇರವಾಗಿ ಭಾಗಿಯಾಗಿದ್ದಾರೆ. ಸಿಎಂ ತತ್‌ಕ್ಷಣ ರಾಜೀನಾಮೆ ನೀಡಿ ತನಿಖೆಗೆ ಒಳಪಟ್ಟು ದೇಶದ ಸಂವಿಧಾನದಲ್ಲಿ ಕಾನೂನು ಎಲ್ಲರಿಗೂ ಒಂದೇ ಎನ್ನುವ ಭಾವನೆಯನ್ನು ಅವರು ಎತ್ತಿಹಿಡಿಯಬೇಕೆಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next