Advertisement

ಗುರುಗ್ರಾಮದಲ್ಲಿ ರಾಜ್ಯ ಬಿಜೆಪಿ ಶಾಸಕರು

06:44 AM Jan 15, 2019 | Harsha Rao |

ಬೆಂಗಳೂರು: ಬಿಜೆಪಿ ಕಾರ್ಯಕಾರಿಣಿ ನಿಮಿತ್ತ ದೆಹಲಿಗೆ ಹೋಗಿದ್ದ ಬಿಜೆಪಿ ಶಾಸಕರು ಇನ್ನೂ ಎರಡು ಮೂರು ದಿನ ಗುರುಗ್ರಾಮದಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆಯಿದೆ.

Advertisement

ಸೋಮವಾರ ಸಂಜೆ ಇವರೆಲ್ಲರೂ ಗುರುಗ್ರಾಮಕ್ಕೆ ತೆರಳಿದ್ದು, ಅಲ್ಲಿಯೇ ಇರಲಿದ್ದಾರೆ. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಭೆ ನಡೆಸಲಿದ್ದಾರೆಂದು ಹೇಳಿದ್ದರಿಂದ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದೆವು. ಇದೀಗ ಇನ್ನೂ 2-3 ಮೂರು ದಿನ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲೇ ವಾಸ್ತವ್ಯ ಮುಂದುವರಿಸಬೇಕಾಗುತ್ತದೆ ಎಂದು ನಾಯಕರು ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಗುರುಗ್ರಾಮದಲ್ಲೇ ಆಚರಿಸುವಂತಾಗಿದೆ. ಕೆಲವರು ಸಿಹಿ ಸುದ್ದಿ ಬರಲಿದೆ ಎಂದು ಪಿಸುಗುಡುತ್ತಿದ್ದಾರೆ. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಹಿರಿಯ ಶಾಸಕರೊಬ್ಬರು ‘ಉದಯವಾಣಿ’ಗೆ ತಿಳಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ವಿಚಾರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ತುಮಕೂರಿಗೆ ಭೇಟಿ ನೀಡಲಿದ್ದಾರೆಂಬ ಮಾಹಿತಿಯಿದ್ದರೂ ಕೊನೆಯ ಕ್ಷಣದಲ್ಲಿ ಅವರೂ ಗುರುಗ್ರಾಮದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದರು.

ನಡೆಯಲಿಲ್ಲ ಸಭೆ: ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಶನಿವಾರ ಮುಕ್ತಾಯವಾದರೂ ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರೊಂದಿಗೆ ವರಿಷ್ಠರು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆಂಬ ಕಾರಣಕ್ಕೆ ಎರಡು ದಿನ ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಸಿದ್ದರು. ಆದರೆ ಭಾನುವಾರ ಯಾವುದೇ ವರಿಷ್ಠರು ಸಭೆ ನಡೆಸಲಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ ಔಪಚಾರಿಕವಾಗಿ ಸಭೆಯನ್ನು ಉದ್ಘಾಟಿಸಿ ಒಂದಿಷ್ಟು ಸಲಹೆ, ಸೂಚನೆ ನೀಡಿದರು. ಸೋಮವಾರ ಅಮಿತ್‌ ಶಾ ಅವರು ಸಭೆ ನಡೆಸಿ ಚರ್ಚಿಸಲಿದ್ದಾರೆಂದು ಕೆಲ ನಾಯಕರು ಹೇಳಿದ್ದರು. ಆದರೆ ಭಾನುವಾರ ಸಂಜೆಯೇ ಅಮಿತ್‌ ಶಾ ದೆಹಲಿ ತೊರೆದಿದ್ದರು.

ಶಾಸಕರಲ್ಲೂ ಗೊಂದಲ: ಸೋಮವಾರ ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದೆ ಎಂದು ಹೇಳಿದರೂ ಯಾವುದೇ ಸಭೆ ನಡೆಯಲಿಲ್ಲ. ಬಳಿಕ ಯಡಿಯೂರಪ್ಪನವರೇ ಔಪಚಾರಿಕವಾಗಿ ಶಾಸಕರೊಂದಿಗೆ ಮಾತನಾಡಿದರು. ಇದರಿಂದ ಗೊಂದಲಕ್ಕೆ ಸಿಲುಕಿದ ಹಲವು ಶಾಸಕರಿಗೆ ತಾವು ದೆಹಲಿಯಲ್ಲೇ ವಾಸ್ತವ್ಯ ಮುಂದುವರಿಕೆಗೆ ಸಕಾರಣವೇ ಗೊತ್ತಾಗಲಿಲ್ಲ. ಈ ನಡುವೆ ಕೆಲ ನಾಯಕರು ಅಗತ್ಯವಿದ್ದವರು ಬೆಂಗಳೂರಿಗೆ ತೆರಳಬಹುದೆಂಬ ಸೂಚನೆ ನೀಡಿದರು. ಆದರೆ ಕೆಲ ಹೊತ್ತಿನಲ್ಲೇ ಯಾರೂ ತೆರಳಬಾರದೆಂಬ ಸಂದೇಶ ರವಾನೆಯಾಯಿತು. ಅಂತಿಮವಾಗಿ ಸಂಜೆ ಸುಮಾರು 90 ಶಾಸಕರು ಗುರುಗ್ರಾಮದ ಖಾಸಗಿ ಹೋಟೆಲ್‌ಗೆ ಸ್ಥಳಾಂತರಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next