ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಎರಡು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಕೇಂದ್ರ ಸಚಿವರಿಗೆ ಈ ಬಾರಿ ಲೋಕಸಭೆ ಚುನಾವಣೆಯ ಟಿಕೆಟ್ ನೀಡಲು ಮುಂದಾಗಿದೆ.
ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧರಾಗಿರುವಂತೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಮತ್ತು ಮನಸುಖ ಮಾಂಡವಿಯ ಅವರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇವರಷ್ಟೇ ಅಲ್ಲದೆ, ಹಾಲಿ ರಾಜ್ಯಸಭೆ ಸದಸ್ಯರಾಗಿರುವ ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂದಿಯಾ ಅವರೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಅಧಿಕವಾಗಿದೆ.
ಪ್ರಧಾನ್ ಅವರು ಈಗಾಗಲೇ ಲೋಕಸಭೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ಅವರು ಒಡಿಶಾದ ದೇವಗಡದಿಂದ ಸ್ಪರ್ಧಿಸಿದ್ದರು. ಇವರ ಸ್ಪರ್ಧೆಯು ಒಡಿಶಾದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವುದು ಪಕ್ಷದ ಲೆಕ್ಕಾಚಾರ.
ಇನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್‌ನಿಂದ ಆಯ್ಕೆಯಾಗಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನೂ ಲೋಕಸಭೆಗೆ ಸ್ಪರ್ಧಿಸುವಂತೆ ಮನವೊಲಿಸುವ ಸಾಧ್ಯತೆಯಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಅಂದು ಸಚಿವರಾಗಿದ್ದ ರಾಜ್ಯಸಭೆ ಸದಸ್ಯರಾದ ರವಿಶಂಕರ್ ಪ್ರಸಾದ್, ಸ್ಮತಿ ಇರಾನಿ ಮತ್ತು ಹರ್‌ದೀಪ್ ಸಿಂಗ್ ಪುರಿ ಅವರನ್ನು ಕಣಕ್ಕಿಳಿಸಿತ್ತು.