ಬೆಂಗಳೂರು :ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರಿಗೆ ಈಗ ಆಪ್ತರಿಂದಲೇ ಆಪತ್ತು ಪ್ರಾರಂಭವಾಗಲಾರಂಭಿಸಿದೆ. ಪ್ರಭಾವಿ ಸಚಿವರು ಹಾಗೂ ನಾಯಕರ ಸಮೀಪವರ್ತಿಗಳನ್ನೇ ಕಾಂಗ್ರೆಸ್ ಬಲೆಗೆ ಬೀಳಿಸಲಾರಂಭಿಸಿದೆ.
ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಪ್ತ ತಮ್ಮಯ್ಯ ತಮ್ಮ ಬೆಂಬಲಿಗರ ಜತೆಗೆ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದರ ಬೆನ್ನಲ್ಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಆಪ್ತ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಮೂಲಗಳ ಪ್ರಕಾರ ಅವರು ಸದ್ಯದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದು, ಸಚಿವ ಮಾಧುಸ್ವಾಮಿ ವಿರುದ್ಧ ಚಿಕ್ಕನಾಯಕನಹಳ್ಳಿಯಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿರುವ ಕಿರಣ್‌ಕುಮಾರ್ ಪಕ್ಷ ತ್ಯಾಗದಿಂದ ಮಾಧುಸ್ವಾಮಿ ಸವಾಲು ಎದುರಿಸಬೇಕಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಈಗ ಆಪ್ತರಿಂದಲೇ ಆಪತ್ತು ಎದುರಿಸುವಂತಾಗಿದೆ. ಅವರ ಜತೆ 14 ವರ್ಷಗಳಿಂದ ಗುರುತಿಸಿಕೊಂಡಿದ್ದ ತಮ್ಮಯ್ಯ ಕಳೆದ ತಿಂಗಳು ಬಂಡಾಯದ ಬಾವುಟ ಹಾರಿಸಿದ್ದರು. ಬಿಜೆಪಿಯಿಂದ ತಮಗೇ ಟಿಕೆಟ್ ನೀಡುವಂತೆ ಅವರು ಒತ್ತಾಯಿಸಿದ್ದರು. ಶುಕ್ರವಾರ ಚಿಕ್ಕಮಗಳೂರಿನಲ್ಲಿ ತಮ್ಮ ಆಪ್ತರ ಜತೆಗೆ ಚರ್ಚೆ ನಡೆಸಿರುವ ಅವರು, ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದಾರೆ.
ಇದೇ ರೀತಿಯ ಸಮಸ್ಯೆ ಇನ್ನು ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಎದುರಿಸುವ ಸಾಧ್ಯತೆ ಇದೆ. ಬೆಂಗಳೂರಿನ ಕೆಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಶಾಸಕರ ಆಪ್ತರು ಬಂಡಾಯದ ಬಾವುಟ ಹಾರಿಸುವ ಸಾಧ್ಯತೆ ಇದೆ. ಕೆಆರ್‌ಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಂದೀಶ್ ರೆಡ್ಡಿ ಸಚಿವ ಭೈರತಿ ಬಸವರಾಜ್ ವಿರುದ್ಧ ಮುನಿಸಿಕೊಂಡಿದ್ದಾರೆ.
ಲೆಕ್ಕಾಚಾರ:
ರಾಜ್ಯದಲ್ಲಿ ಚುನಾವಣಾ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆಯಬುದೆಂದು ನಿರೀಕ್ಷೆ ಇತ್ತು. ಆದರೆ ಶಾಸಕರು ಇದ್ದಲ್ಲೇ ನೆಲೆ ಕಂಡುಕೊಳ್ಳುವುದಕ್ಕೆ ಯೋಚಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಎರಡನೇ ಹಂತದ ನಾಯಕರಿಗೆ “ಆಪರೇಷನ್ ‘ ಮಾಡಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದೆ.