ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬಳಿಕ ತೀವ್ರ ಅಸಮಾಧಾನಿತರಾಗಿರುವ ಮಾಜಿ ಸಿಎಂ , ಸಂಸದ ಡಿ.ವಿ.ಸದಾನಂದ ಗೌಡ ಅವರು ‘ಶೀಘ್ರದಲ್ಲೇ ನನ್ನ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ” ಎಂದು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ” ಕರ್ನಾಟಕದ ಬಿಜೆಪಿ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷ ಎಂದು ಹೇಳಲು ಏನೂ ಉಳಿದಿಲ್ಲ” ಎಂದಿದ್ದಾರೆ.
“ನನ್ನನ್ನು ಬೇರೆ ಪಕ್ಷದವರು ಸಂಪರ್ಕಿಸಿರುವುದು ನಿಜ, ನಮ್ಮ ಪಕ್ಷದ ನಾಯಕರು ಕೂಡ ನನ್ನನ್ನು ಸಂಪರ್ಕಿಸಿ ಚರ್ಚಿಸಿದ್ದೂ ನಿಜ. ನಿನ್ನೆ ರಾತ್ರಿ ನಮ್ಮ ಪಕ್ಷದ ಪ್ರಮುಖ ಪದಾಧಿಕಾರಿಯೊಬ್ಬರು ನನ್ನ ಬಳಿ ಬಂದು ಸಮಾಧಾನಪಡಿಸಲು ಯತ್ನಿಸಿದ್ದಾರೆ. ವಿವಿಧ ಬೆಳವಣಿಗೆಗಳು ನಡೆಯುತ್ತಿವೆ”ಎಂದು ಹೇಳಿದ್ದಾರೆ.
ಹುಟ್ಟುಹಬ್ಬದಂದು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಸಮಯ ಕಳೆಯುತ್ತೇನೆ. ನಂತರ ನಿರ್ಧಾರ ತೆಗೆದುಕೊಂಡು ನಿಮ್ಮ(ಮಾಧ್ಯಮ) ಮುಂದೆ ಬರುತ್ತೇನೆ. ನನ್ನ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳಬೇಕು. ನನ್ನ ನಿರ್ಧಾರದ ಬಗ್ಗೆ ನಾನು ನನ್ನ ಕುಟುಂಬದೊಂದಿಗೆ ಚರ್ಚಿಸಬೇಕು”ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಅವರು 28 ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಿಮ್ಮನ್ನು ಬಿಟ್ಟು ಬೇರೆ ಅಭ್ಯರ್ಥಿಗಳಿಲ್ಲ ಎಂದು ಹೇಳಿದ್ದರು. ದೆಹಲಿಯಲ್ಲಿ ಮತ್ತು ಇಲ್ಲಿ ನಡೆದ ಕೆಲವು ಬೆಳವಣಿಗೆಗಳ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿದರು.
“ನಾನು ಚುನಾವಣ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೆ, ಆದರೆ ಎಲ್ಲಾ ಹಿರಿಯ ರಾಜ್ಯ ನಾಯಕರು ನನ್ನನ್ನು ಸ್ಪರ್ಧಿಸುವಂತೆ ಕೇಳಿಕೊಂಡರು, ಆದರೆ ಕೊನೆಯ ಕ್ಷಣದಲ್ಲಿ ಯಾರೂ ನನ್ನ ರಕ್ಷಣೆಗೆ ಬರದೇ ನನಗೆ ಮುಜುಗರ ಉಂಟು ಮಾಡಿದ್ದಾರೆ. ರಾಜಕೀಯದಲ್ಲಿ ಏರಿಳಿತಗಳು ಮತ್ತು ಮುಜುಗರಗಳು ಸಾಮಾನ್ಯ. ಆದರೆ, ವಿಷಯ ತಿಳಿದಿದ್ದರೂ, ಸ್ವಾರ್ಥಕ್ಕಾಗಿ ಯಾರಿಗಾದರೂ ತ್ಯಾಗ ಮಾಡುವುದು ಹಾನಿಯಾಗುತ್ತದೆ” ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.
ಮನೆಗೆ ದೌಡಾಯಿಸಿದ ಬಿಜೆಪಿ ನಾಯಕರು
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸದಾನಂದ ಗೌಡ ಅವರ ನಿವಾಸಕ್ಕೆ ಸೋಮವಾರ ಪ್ರತಿಪಕ್ಷ ನಾಯಕ ಆರ್. ಅಶೋಕ್ , ಮಾಜಿ ಸಚಿವ ಅಶ್ವತ್ಥ ನಾರಾಯಣ ಸೇರಿ ಇತರರು ಭೇಟಿ ನೀಡಿ ಶುಭಾಶಯ ಕೋರಿದರು. ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಗಳ ನಡುವೆ ಪ್ರಮುಖ ನಾಯಕರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.