ಲಕ್ನೋ: ʼದಿ ಕೇರಳ ಸ್ಟೋರಿʼ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಸಿನಿಮಾವನ್ನು ಹೆಚ್ಚಿನ ಜನರು ನೋಡಬೇಕು ಮುಖ್ಯವಾಗಿ ವಿದ್ಯಾರ್ಥಿನಿಯರು ನೋಡಬೇಕೆನ್ನುವ ದೃಷ್ಟಿಯಿಂದ ಬಿಜೆಪಿ ನಾಯಕರೊಬ್ಬರು ʼದಿ ಕೇರಳ ಸ್ಟೋರಿʼ ಸಿನಿಮಾವನ್ನು 80 ವಿದ್ಯಾರ್ಥಿನಿಯರಿಗೆ ತಮ್ಮ ಖರ್ಚಿನಲ್ಲೇ ಉಚಿತವಾಗಿ ತೋರಿಸಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಕಾರ್ಯದರ್ಶಿ ಅಭಿಜತ್ ಮಿಶ್ರಾ ಎನ್ನುವವರು ಲಕ್ನೋ ಕಾಲೇಜಿನ 80 ವಿದ್ಯಾರ್ಥಿನಿಯರಿಗೆ ʼದಿ ಕೇರಳ ಸ್ಟೋರಿʼ ಸಿನಿಮಾ ಪ್ರದರ್ಶನವನ್ನು ಉಚಿತವಾಗಿ ಏರ್ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ʼಹುಡುಗಿಯರನ್ನು ಲವ್ ಜಿಹಾದ್ ನಿಂದ ರಕ್ಷಿಸಲುʼ ʼದಿ ಕೇರಳ ಸ್ಟೋರಿʼ ತೋರಿಸಿ ಎಂದಿದ್ದಾರೆ.
ʼಇಂಡಿಯಾ ಟುಡೇʼ ಜೊತೆ ಮಾತನಾಡಿದ ಅವರು,”ಈ ಚಲನಚಿತ್ರವನ್ನು ವಿಶೇಷವಾಗಿ ಹುಡುಗಿಯರಿಗಾಗಿ ನಿರ್ಮಿಸಲಾಗಿದೆ. ಹುಡುಗಿಯರು ಇಂಥ ಟ್ರ್ಯಾಪ್ ಗೆ ಬೀಳುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಕೇರಳದಲ್ಲಿ ಸುಮಾರು 30,000 ಹುಡುಗಿಯರು ಕಾಣೆಯಾಗಿದ್ದಾರೆ.” ‘ಲವ್ ಜಿಹಾದ್’ ಬಳಸಿ ಈ ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲಾಯಿತು” ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ಜೊತೆ ಸಿನಿಮಾ ನೋಡಿದ ಶಿಕ್ಷಕಿಯೊಬ್ಬರು “ಹುಡುಗಿಯರು ಕೆಟ್ಟ ಜನರಿಂದ ದೂರವಿರಬೇಕೆಂದು” ಹೇಳಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ʼದಿ ಕೇರಳ ಸ್ಟೋರಿʼಯನ್ನು ರಾಜ್ಯದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ ದಿನವೇ ಲಕ್ನೋದಲ್ಲಿ ಈ ಉಚಿತ ಪ್ರದರ್ಶನ ನಡೆದಿದೆ.