ಕಾಶ್ಮೀರ್: ಜಮ್ಮು-ಕಾಶ್ಮೀರ್ ಸೋಪೋರ್ ಜಿಲ್ಲೆಯ ವಾಟರ್ ಗಾಮ್ ಮುನ್ಸಿಪಲ್ ಸಮಿತಿಯ ಉಪಾಧ್ಯಕ್ಷ, ಬಿಜೆಪಿ ಮುಖಂಡ ಮೆಹ್ರಾಜುದೀನ್ ಮಲ್ಲಾ ಅವರನ್ನು ಬುಧವಾರ ಬೆಳಗ್ಗೆ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಮೆಹ್ರಾ ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಮೆಹ್ರಾಜುದೀನ್ ಅಪಹರಣವನ್ನು ಹಿರಿಯ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದು, ಮೆಹ್ರಾ ಅವರು ಮನೆ ಸಮೀಪದ ರಸ್ತೆ ಬಳಿ ನಿಂತಿದ್ದಾಗ ಬೆಳಗ್ಗೆ 8-30ರ ಹೊತ್ತಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಆಗಮಿಸಿ ಬಲವಂತವಾಗಿ ಎಳೆದೊಯ್ದಿದ್ದು, ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಮೆಹ್ರಾ ಅವರನ್ನು ಕಿಡ್ನಾಪ್ ಮಾಡಿರುವ ಆರೋಪಿಗಳ ಬಂಧನಕ್ಕಾಗಿ ಭದ್ರತಾ ಪಡೆಯ ನೆರವು ಕೋರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಪತ್ತೆಯಾದ ಮೆಹ್ರಾ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಪೋರಾದ ಎಲ್ಲಾ ಪ್ರವೇಶ ದ್ವಾರ ಮತ್ತು ಹೊರ ಹೋಗುವ ದಾರಿಗಳಲ್ಲಿ ಬಿಗಿ ಭದ್ರತೆಯಲ್ಲಿ ಕಣ್ಗಾವಲು ಇಡುವಂತೆ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಜುಲೈ 8ರಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯ ವಾಸೀಂ ಬರಿ ಅವರನ್ನು ಬಂಡಿಪೋರಾದ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದರು.