ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿದ್ದು ಇಂದಿನಿಂದ ನವೆಂಬರ್ 14ರವರೆಗೂ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಆರಂಭಿಸಿದೆ.
ಏತನ್ಮಧ್ಯೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ಸಮಬೆಸ ವಾಹನ ಸಂಚಾರ ವ್ಯವಸ್ಥೆಯನ್ನು ವಿರೋಧಿಸಿ ಮನೆಯಿಂದ ಕಿತ್ತಳೆ ಬಣ್ಣದ ಎಸ್ ಯುವಿ ಕಾರಿನಲ್ಲಿ ಹೊರಟಿದ್ದ ಬಿಜೆಪಿ ಮುಖಂಡ, ರಾಜ್ಯ ಸಭಾ ಸದಸ್ಯ ವಿಜಯ್ ಗೋಯಲ್ ಕಾರನ್ನು ನಿಲ್ಲಿಸಿ ಸಂಚಾರಿ ಪೊಲೀಸರು 4 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಸೋಮವಾರ ನಡೆದಿದೆ.
ಇದೊಂದು ಕೇಜ್ರಿವಾಲ್ ಸರ್ಕಾರದ ಸ್ಟಂಟ್ ಮತ್ತು ನಾಟಕವಾಗಿದೆ ಎಂದು ಗೋಯಲ್ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದು, ಮನೆಗೆ ವಾಪಸ್ ತೆರಳುವ ವೇಳೆ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಆಗಮಿಸಿ ಹೂವಿನ ಗುಚ್ಛ ನೀಡಿದ್ದರು. ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕೈಗೊಂಡ ನಿರ್ಧಾರ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಮಾಧ್ಯಮಗಳ ಪ್ರತಿನಿಧಿಗಳ ಮುಂದೆ ಕೆಲಹೊತ್ತು ಹೈಡ್ರಾಮಾ ನಡೆಯಿತು. ಐದು ವರ್ಷಗಳ ಆಡಳಿತಾವಧಿಯಲ್ಲಿ ನಿಮ್ಮ ಸರ್ಕಾರ ಏನೂ ಮಾಡಿಲ್ಲ. ಪಂಜಾಬ್, ಹರ್ಯಾಣ ರೈತರಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ನಿಮ್ಮ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಹೇಗೆ ಸಹಾಯ ಮಾಡಲಿದೆ ಎಂದು ಗೋಯಲ್ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೆಹ್ಲೋಟ್, ಒಂದು ವೇಳೆ ಶೇ.50ರಷ್ಟು ವಾಹನಗಳು ರಸ್ತೆಗೆ ಇಳಿಯದಿದ್ದಲ್ಲಿ, ಮಾಲಿನ್ಯದ ಪ್ರಮಾಣ ಕಡಿಮೆಯಾಗಲಿದೆ ಎಂಬುದು ನಮ್ಮ ನಿರೀಕ್ಷೆ ಎಂದರು. ಮಾಲಿನ್ಯ ನಿಯಂತ್ರಣದ ಬಗೆಗಿನ ನಿಮ್ಮ ಮುಂಜಾಗ್ರತಾ ಕ್ರಮ ನಾನು ಸ್ವಾಗತಿಸುತ್ತೇನೆ. ಆದರೆ ನೀವು ದ್ವಿಚಕ್ರ ವಾಹನ, ಓಲಾ, ಉಬೇರ್ ಹಾಗೂ ಟ್ಯಾಕ್ಸಿಗಳಿಗೆ ವಿನಾಯ್ತಿ ನೀಡಿದ್ದೀರಿ. ಕೇವಲ ನಾಲ್ಕು ಚಕ್ರದ ವಾಹನಗಳು ಮಾತ್ರ ಈ ಕಾನೂನನ್ನು ಪಾಲಿಸಬೇಕು. ಹೀಗಾಗಿ ನಿಮ್ಮ ಯೋಚನೆ ನಾಟಕ ಅಂತ ನಾನು ಭಾವಿಸುತ್ತೇನೆ ಎಂದು ಗೋಯಲ್ ಹೇಳಿದರು.
ನಾವು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ. ಒಂದು ವೇಳೆ ನೀವು ಸಹಕಾರ ನೀಡದಿದ್ದರೆ, ಜನರು ಕೂಡಾ ಸಮರ್ಪಕವಾದ ಸಂದೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಗೆಹ್ಲೋಟ್ ಪ್ರತಿಕ್ರಿಯೆ ನೀಡಿದರು.