ಹುಬ್ಬಳ್ಳಿ: ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಹಿಮಾಚಲ ಹಾಗೂ ಗುಜರಾತ್ ರಾಜ್ಯದ ಚುನಾವಣೆ ಫಲಿತಾಂಶದ ನಂತರ ರಾಜ್ಯ ಹಾಗೂ ದೇಶದಲ್ಲಿ ಮತ್ತೊಂದು ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಿಲ್ಲ. ಕಾಂಗ್ರೆಸ್‌ನ ನಾಯಕರೇ ಪಕ್ಷವನ್ನು ತೊರೆಯುತ್ತಿರುವಾಗ ರಾಜಕೀಯದಲ್ಲಿ ಉತ್ತಮ ಭವಿಷ್ಯ ಕಾಣುವವರು ಯಾರೂ ಕೂಡ ಆ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಹೀಗಿರುವಾಗ ಬಿಜೆಪಿಯ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವುದು ಶುದ್ಧ ಸುಳ್ಳು, ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುವವರು ಮಾತ್ರ ಕಾಂಗ್ರೆಸ್‌ಗೆ ಹೋಗುತ್ತಾರೆ. ರಾಜಕೀಯದಲ್ಲಿ ಇರುವವರು ದಡ್ಡರಲ್ಲ ಎಂದರು.
ಕಾಂಗ್ರೆಸ್ ನಾಯಕರು ಭಾರತ ಜೋಡೋ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಆದರೆ ನಾಯಕರು ಕಾಂಗ್ರೆಸ್ ಚೋಡೋ ನಡೆಸಿದ್ದಾರೆ. ಅಲ್ಲಿ ನೀತಿ ಹಾಗೂ ನೇತೃತ್ವ ಇಲ್ಲದ ಪಕ್ಷವಾಗಿದೆ. ಕಾಂಗ್ರೆಸ್ ನಾಯಕರನ್ನು ಜೋಡಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಭಾರತವನ್ನು ಯಾವ ನಿಟ್ಟಿನಲ್ಲಿ ಜೋಡಿಸುತ್ತಾರೆ. ನೀತಿ, ನೇತೃತ್ವ ಹಾಗೂ ನಿಯತ್ತು ಇರಬೇಕು. ಕಾಂಗ್ರೆಸ್‌ಗೆ ಮೂರು ಅಂಶಗಳ ಅವಶ್ಯಕತೆಯಿದೆ. ಈ ಮೂರು ಇಲ್ಲದಿರುವುದು ಅದರ ಅವನತಿಗೆ ಕಾರಣವಾಗಿದೆ. ಕುಟುಂಬದ ನಿಯತ್ತನ್ನು ಪಕ್ಷದ ನಿಯತ್ತು ಎಂದು ಭಾವಿಸಬಾರದು. ಅಲ್ಲಿ ಯಾರಾದರೂ ಪ್ರಶ್ನಾತೀತ ನಾಯಕರು ಯಾರಾದರೂ ಇದ್ದಾರೆಯೇ. ಈ ರ್‍ಯಾಲಿಯಿಂದ ಯಾವ ಪರಿಣಾಮ ಬೀರುವುದಿಲ್ಲ. ಕೇವಲ ಸುದ್ದಿಯಲ್ಲಿರಬೇಕು ಎನ್ನುವ ಕಾರಣಕ್ಕೆ ಆ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷದ ಬಗ್ಗೆ ಭಯ ಹಾಗೂ ಕಾಳಜಿಯಿಲ್ಲ. ಅದರ ಬಗ್ಗೆ ಮರುಕುವಿದೆ. ಆದಷ್ಟು ಬೇಗ ಅಲ್ಲಿನ ನಾಯಕರು ಪಕ್ಷವನ್ನು ತೊರೆದರೆ ಅವರಿಗೆ ರಾಜಕೀಯ ಭವಿಷ್ಯವಿದೆ ಎಂದರು.
ಸಾರ್ವಜನಿಕರು ಒಪ್ಪುವ ಜೀವನ ಅಗತ್ಯ:
ಶಾಸಕ ಅರವಿಂದ ಲಿಂಬಾವಳಿ ಅವರ ಘಟನೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಪ್ರತಿಯೊಂದು ಸಣ್ಣ ಸಂಗತಿಗಳ ಬಗ್ಗೆ ಎಚ್ಚರ ವಹಿಸಬೇಕು. ಸಾರ್ವಜನಿಕ ನಡವಳಿಗೆ ಹಾಗೂ ಸಮಾಜ ಒಪ್ಪುವ ರೀತಿಯಲ್ಲಿ ಇರಬೇಕು. ಸಣ್ಣ ವ್ಯತ್ಯಾಸಗಳು ಆದರೂ ಕೂಡ ವ್ಯಕ್ತಿ ಹಾಗೂ ಪಕ್ಷದ ಮೇಲೆ ಆಗುತ್ತದೆ. ಅರವಿಂದ ಲಿಂಬಾವಳಿ ಹಾಗೂ ಪ್ರಿಯಾಂಕ ಖರ್ಗೆ ಇಬ್ಬರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಲಿಂಬಾವಳಿ ಅವರ ಘಟನೆಯ ಹಿನ್ನೆಲೆ ಗೊತ್ತಿಲ್ಲ. ಆದರೆ ಪ್ರಿಯಾಂಕ ಖರ್ಗೆ ಅವರು ಪುನಃ ಪುನಃ ಉಚ್ಚರಿಸುತ್ತಿದ್ದರು. ಸರಕಾರಿ ನೌಕರಿಯಲ್ಲಿ ಲಕ್ಷಾಂತರ ಮಹಿಳೆಯರಿದ್ದಾರೆ. ಖರ್ಗೆ ಅವರು ಒಬ್ಬ ವ್ಯಕ್ತಿ ಬಗ್ಗೆ ನೀಡಿರುವ ಹೇಳಿಕೆಯಲ್ಲ ಎಂದರು.
ಅಂತಿಮವಾಗಿ ಪಕ್ಷ ಸತ್ಯಕ್ಕೆ ಗೆಲುವು :
ಲೈಂಗಿಕ ದೌರ್ಜ್ಯನ್ಯ ಆರೋಪದ ಮೇಲೆ ಮುರುಘಾ ಶರಣರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತನಿಖೆ ಎದುರಿಸುತ್ತಿದ್ದಾರೆ. ನಿಷ್ಟಪಕ್ಷಪಾತವಾಗಿ ತನಿಖೆ ನಡೆಯಲಿದ್ದು, ಸತ್ಯ ಹೊರ ಬರಲಿದೆ. ಸತ್ಯ ಹೊಸ್ತಿಲು ದಾಟುವ ಮೊದಲು ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ. ಅದರೆ ಅಂತಿಮವಾಗಿ ಸತ್ಯವೇ ಗೆಲ್ಲಲಿದೆ. ಸನಾತನ ಧರ್ಮದಲ್ಲಿ ಸತ್ಯಕ್ಕೆ ಗೆಲುವಿದೆ ಎಂದರು.