ಹೊಸದಿಲ್ಲಿ : ಸಂಸತ್ ಕಲಾಪ ಭಂಗ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಒದಗಿರುವುಕ್ಕೆ ಪ್ರಧಾನಿ ಮೋದಿ ಸರಕಾರವನ್ನು ಗುರಿ ಇರಿಸಿ ರಾಜಘಾಟ್‌ನಲ್ಲಿ ಇಂದು ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವಿವಾದಕ್ಕೆ ಕೊನೆಯೇ ಇಲ್ಲವೇನೋ ಎಂಬಂತಹ ಸ್ಥಿತಿ ಈಗ ಕಂಡುಬರುತ್ತಿದೆ.
ರಾಜಘಾಟ್ ಉಪವಾಸ ವೇದಿಕೆಯಿಂದ ಸಿಕ್ಖ್ ವಿರೋಧಿ ದಂಗೆಯ ಕಳಂಕಿತ ಕಾಂಗ್ರೆಸ್ ನಾಯಕ, ಜಗದೀಶ್ ಟೈಟ್ಲರ್ ಅವರನ್ನು ಎತ್ತಂಗಡಿ ಮಾಡಿದ ವಿವಾದವನ್ನು ಅನುಸರಿಸಿ, ಕಾಂಗ್ರೆಸ್ ನಾಯಕರು ಉಪವಾಸ ಕೈಗೊಳ್ಳುವ ಮುನ್ನ ದಿಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಉಪಾಹಾರ ಸವಿದ ಚಿತ್ರ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಸಹಿತ ಪಕ್ಷದ ಹಲವು ಪ್ರಮುಖರು ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸ್ವೀಕರಿಸುತ್ತಿರುವ ಫೋಟೋವನ್ನು ಮಾಜಿ ದಿಲ್ಲಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರನಾಗಿರುವ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಟ್ವಿಟರ್‌ಗೆ ಅಪ್ ಲೋಡ್ ಮಾಡಿದ್ದಾರೆ.
ಉಪಾಹಾರ ಸವಿಯುತ್ತಿರುವವರಲ್ಲಿ ಮಾಕನ್ ಜತೆಗೆ ಹರೂನ್ ಯೂಸುಫ್ ಮತ್ತು ಅರವಿಂದರ್ ಸಿಂಗ್ ಲವ್‌ಲಿ ಕೂಡ ಕಾಣಿಸಿಕೊಂಡಿದ್ದಾರೆ. “ಕಾಂಗ್ರೆಸ್ ಪಕ್ಷದವರು ಇತರ ಪಕ್ಷದವರಿಗೆ ರಾಜ್‌ಘಾಟ್ ಉಪವಾಸದಲ್ಲಿ ಜತೆಗೂಡುವಂತೆ ಕೇಳಿಕೊಂಡಿದ್ದಾರೆ; ಆದರೆ ಅವರೇ ಉಪವಾಸಕ್ಕೆ ಮುನ್ನ ದಿಲ್ಲಿ ರೆಸ್ಟೋರೆಂಟ್‌ನಲ್ಲಿ ಛೋಲೆ ಭಟೂರೆಯನ್ನು ಭರ್ಜರಿಯಾಗಿ ಸವಿದಿದ್ದಾರೆ’ ಎಂದು ಖುರಾನಾ ಬರೆದಿದ್ದಾರೆ.
ಹರೀಶ್ ಖುರಾನಾ ವೈರಲ್ ಪೋಸ್ಟ್ ಗೆ ಕಟುವಾಗಿ ಉತ್ತರಿಸಿರುವ ಕಾಂಗ್ರೆಸ್ ನಾಯಕ ಲವ್‌ಲಿ ಅವರು “ಈ ಚಿತ್ರವನ್ನು ಬೆಳಗ್ಗೆ 8 ಗಂಟೆಗೆ ಮುನ್ನ ತೆಗೆಯಲಾಗಿದೆ. ನಮ್ಮ ಸಾಂಕೇತಿಕ ಉಪವಾಸ 10.30ರಿಂದ 4.30ರ ವರೆಗೆ; ಇದೇನೂ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಅಲ್ಲ” ಎಂದು ಹೇಳಿದ್ದಾರೆ.
“ಬಿಜೆಪಿಯವರು ದೇಶವನ್ನು ಸರಿಯಾಗಿ ನಡೆಸುವುದನ್ನು ಬಿಟ್ಟು ನಾವು ಕಾಂಗ್ರೆಸಿಗರು ಏನು ತಿನ್ನುತ್ತಿದ್ದೇವೆ ಎಂಬುದರ ಮೇಲೆಯೇ ಕಣ್ಣಿಟ್ಟಿದ್ದಾರೆ; ಇದೇ ಅವರಲ್ಲಿನ ದೋಷ’ ಎಂದು ಲವ್‌ಲಿ ಜರೆದಿದ್ದಾರೆ.
ರಾಜಘಾಟ್ ಉಪವಾಸ ವೇದಿಕೆಯಲ್ಲಿ ರಾಹುಲ್ ಗಾಂಧಿ ಜತೆ ಪಕ್ಷದ ಉನ್ನತ ಪದಾಧಿಕಾರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು ಮಾತ್ರವೇ ಇರಬೇಕೆಂಬುದನ್ನು ಮೊದಲೇ ತೀರ್ಮಾನಿಸಲಾಗಿತ್ತು. ಹಾಗಾಗಿ ಟೈಟ್ಲರ್ ಅವರನ್ನು ವೇದಿಕೆಯಿಂದ ತೆರವು ಗೊಳಿಸಲಾಯಿತು ಎಂದು ಲವ್ವಿ “ಟೈಟ್ಲರ್ ವಿವಾದ’ಕ್ಕೆ ಉತ್ತರ ನೀಡಿದರು.