ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿ ಸುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ರವಿವಾರ ಚಾಲನೆ ನೀಡಲಾಗಿದೆ. ದೇಶದ ಹಲವು ರಾಜ್ಯಗಳ ಪದಾ ಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಚಿಂತನ-ಮಂಥನ ನಡೆಸಿದ್ದಾರೆ.
ನಗರದ ಮಯೂರ ಪ್ರಸಿಡೆನ್ಸಿ ಕ್ಲಬ್‌ನಲ್ಲಿ ಆರಂಭಗೊಂಡ ಕಾರ್ಯ ಕಾರಿಣಿ ಸಭೆ ಆರಂಭಕ್ಕೂ ಮುನ್ನ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ ಚಾಹರ್ ಚಾಲನೆ ನೀಡಿದರು.
ರಾಜಕುಮಾರ ಚಾಹರ್ ಮಾತನಾಡಿ, ಕೃಷಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೀಟನಾಶಕ, ರಾಸಾ ಯನಿಕಗಳ ವಿಪರೀತ ಬಳಕೆಯಿಂದ ನಾವು ತಿನ್ನುವ ಆಹಾರ ವಿಷವಾಗುತ್ತಿದೆ. ಆರೋಗ್ಯ ಹದಗೆಟ್ಟು ಅನೇಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಇದನ್ನು ತಪ್ಪಿಸಿ ಸ್ವಸ್ಥ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶವನ್ನು ಈ ಕಾರ್ಯಕಾರಿಣಿ ಹೊಂದಿದೆ ಎಂದರು.
ಯಡಿಯೂರಪ್ಪ ಮಾತನಾಡಿ, ರೈತರಿಗಾಗಿ ಮೋದಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶದ ರೈತರ ಏಳಿಗೆಗೆ ಶ್ರಮಿಸುತ್ತಿದೆ. 2008ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ದೇಶದ ಮೊದಲ ಕೃಷಿ ಬಜೆಟ್ ಮಂಡಿಸಿದ್ದೇನೆ. ಸರಕಾರಿ ಕಾರ್ಯಕ್ರಮದಲ್ಲಿ ರೈತಗೀತೆ ಕಡ್ಡಾಯಗೊಳಿಸಿದ ಕೀರ್ತಿಯೂ ಬಿಜೆಪಿಗೆ ಸಲ್ಲುತ್ತದೆ. ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದ 6 ಸಾ. ಹಾಗೂ ರಾಜ್ಯದ 4 ಸಾ. . ಸೇರಿ ಒಟ್ಟು 10 ಸಾ. ರೂ. ಸಹಾಯಧನ ರೈತರ ಖಾತೆಗೆ ಜಮೆ ಆಗುತ್ತಿದೆ ಎಂದರು.
ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ವೀರ-ಶೂರರ ನಾಡು ಬೆಳಗಾವಿ. ಕೊಂಕಣಿ, ಕನ್ನಡ, ಮರಾಠಿ ಭಾಷೆಯ ಸಂಸ್ಕೃತಿ ಇಲ್ಲಿದೆ. ಹೀಗಾಗಿ ವಾಜಪೇಯಿ ಈ ನಗರವನ್ನು ಕೋಕಮ್ ಎಂದು ಬಣ್ಣಿಸಿದ್ದರು. ಕೃಷಿ ಪ್ರಧಾನ ಜಿಲ್ಲೆ ಆಗಿರುವ ಬೆಳಗಾವಿಯಲ್ಲಿ ಈ ಸಲದ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ರೈತರ ಕೆಲವು ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಸಂಸದೆ ಮಂಗಳಾ ಅಂಗಡಿ ಇದ್ದರು. ಬಿಹಾರದ ಶಂಭು ಕುಮಾರ ನಿರೂಪಿಸಿದರು. ದೇಶದ ವಿವಿಧೆಡೆಗಳಿಂದ 200ಕ್ಕೂ ಹೆಚ್ಚು ಪದಾ ಧಿಕಾರಿಗಳು ಪಾಲ್ಗೊಂಡಿದ್ದಾರೆ.
ಇದಕ್ಕೂ ಮುನ್ನ ನಗರದ ಕೋಟೆ ಕೆರೆಯಿಂದ ಮಯೂರ್ ಪ್ರಸಿಡೆನ್ಸಿ ಕ್ಲಬ್‌ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಯಡಿಯೂರಪ್ಪ ಸಹಿತ ಹಲವು ನಾಯಕರು ಚಕ್ಕಡಿಯಲ್ಲಿ ಆಗಮಿಸಿ ಗಮನ ಸೆಳೆದರು.