ಹೊಸದಿಲ್ಲಿ : ಜಮ್ಮು ಕಾಶ್ಮೀರದ ಭಾರತೀಯ ಜನತಾ ಪಕ್ಷ ಘಟಕದ ಅಧ್ಯಕ್ಷ ರವೀಂದ್ರ ರೈನಾ ಅವರು ತಮಗೆ ಪಾಕಿಸ್ಥಾನದಿಂದ ಜೀವ ಬೆದರಿಕೆಯ ಕರೆಗಳು ಬರುತ್ತಿರುವುದಾಗಿ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ರೈನಾ ಅವರು, “ಇಂದು ಗುರುವಾರ ಕೂಡ ನನಗೆ ಕರಾಚಿಯಿಂದ ಬೆದರಿಕೆ ಕರೆಗಳು ಬಂದಿವೆ; ಈ ಬಗ್ಗೆ ನಾನು ಭದ್ರತಾ ಅಧಿಕಾರಿಗಳಿಗೆ ತಿಳಿಸಿದ್ದೇನೆ” ಎಂದು ಹೇಳಿದರು.
ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿರುವ ಎನ್ ಎನ್ ವೋರಾ ಸಹಿತ ಎಲ್ಲ ಸಂಬಂಧಿತರಿಗೆ ನಾನು ನನಗೆ ಪಾಕಿಸ್ಥಾನದಿಂದ ಬೆದರಿಕೆ ಕರೆಗಳು ಬರುತ್ತಿರುವುದನ್ನು ತಿಳಿಸಿದ್ದೇನೆ; ಕಳೆದ ಕೆಲವು ತಿಂಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದ್ದು ಇಂದು ಕೂಡ ಕರಾಚಿಯಿಂದ ಆ ರೀತಿಯ ಕರೆ ಬಂದಿದೆ ಎಂದು ರೈನಾ ಹೇಳಿದರು.
ರಮ್ಜಾನ್ ಮಾಸ ಮುಗಿದ ಬೆನ್ನಿಗೇ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಆರಂಭಿಸಲು ಕೇಂದ್ರ ಸರಕಾರ ಕೈಗೊಂಡ ನಿರ್ಧಾರದಿಂದ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರಿಗೆ ಅಸಮಾಧಾನ ಉಂಟಾಗಿತ್ತು. ಪರಿಣಾಮವಾಗಿ ರಾಜ್ಯದಲ್ಲಿನ ಪಿಡಿಪಿ ಮೈತ್ರಿಕೂಟದಿಂದ ಬಿಜೆಪಿ ಹೊರಬಂದಿತ್ತು; ಸರಕಾರ ಪತನಗೊಂಡಿತ್ತು.
ಜಮ್ಮು ಕಾಶ್ಮೀರದಲ್ಲಿನ ಈ ಹಠಾತ್ ಬೆಳವಣಿಗೆಗಳಿಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ರೈನಾ ಅವರೇ ಕಾರಣರೆಂದು ಹೆಚ್ಚಿನ ವಲಯಗಳಲ್ಲಿ ಶಂಕಿಸಲಾಗಿದ್ದು ಅವರಿಗೆ ಪಾಕಿಸ್ಥಾನದಿಂದ ಜೀವ ಬೆದರಿಕೆ ಕರೆಗಳು ಬರಲು ಕಾರಣವಾಗಿದೆ ಎಂದು ತಿಳಿಯಲಾಗಿದೆ.