Advertisement

Politics: ರಾಜ್ಯದಲ್ಲಿ ಮೈತ್ರಿಗೆ ಮುನ್ನುಡಿ ಬರೆದ ಬಿಜೆಪಿ-ಜೆಡಿಎಸ್‌

11:21 PM Jan 21, 2024 | Team Udayavani |

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನ ಎ.ಪಿ.ರಂಗನಾಥ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್‌ ನಾಯಕರು ಒಮ್ಮತದ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಮೈತ್ರಿಗೆ ಮುನ್ನುಡಿ ಬರೆದಿದ್ದಾರೆ. ಇದರೊಂದಿಗೆ ಬಿಜೆಪಿ ತನ್ನ ಕ್ಷೇತ್ರವನ್ನು ಮಿತ್ರಪಕ್ಷಕ್ಕೆ ತ್ಯಾಗ ಮಾಡಿದೆ.

Advertisement

ಜತೆಗೆ ಮುಂಬರುವ ವಿಧಾನ ಪರಿಷತ್ತಿನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ 6 ಚುನಾವಣೆಗೂ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಜಂಟಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಖಚಿತಗೊಂಡು ಎರಡೂವರೆ ತಿಂಗಳಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ವರಿಷ್ಠರು ಒಂದೆಡೆ ಸೇರಿ ಸಭೆ ನಡೆಸಿರಲಿಲ್ಲ. ಜೆಡಿಎಸ್‌ ನಾಯಕರೊಂದಿಗಿನ ಮೈತ್ರಿ ಮಾತುಕತೆಯನ್ನು ಬಿಜೆಪಿಯ ದಿಲ್ಲಿ ನಾಯಕರೇ ನಿರ್ವಹಿಸಿದ್ದರು. ಒಂದು ರೀತಿ ಯಲ್ಲಿ ಇಡೀ ಮೈತ್ರಿ ಮಾತುಕತೆಯೇ ರಾಜ್ಯ ಬಿಜೆಪಿ ನಾಯಕರಿಗೆ ಗೌಪ್ಯವಾಗಿತ್ತು. ಆ ಬಳಿಕವು ಜೆಡಿಎಸ್‌ ನಾಯಕರು ಬಿಜೆಪಿಯ ದಿಲ್ಲಿ ನಾಯಕರನ್ನು ಸರಾಗವಾಗಿ ಭೇಟಿ ಮಾಡುತ್ತಲೇ ಬಂದಿದ್ದರೆ ಇತ್ತ ರಾಜ್ಯ ನಾಯಕರ ಜತೆ ಸೇರಿ ಚರ್ಚೆ ಕೂಡ ನಡೆದಿರಲಿಲ್ಲ. ಈಗ ಹಿರಿತಲೆಗಳ ಮಟ್ಟದಲ್ಲಿ ನಡೆದಿರುವ ಮಾತುಕತೆಗಳು ತಳಮಟ್ಟದಲ್ಲಿ ಪ್ರತಿಫ‌ಲನ ಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಉಭಯ ಪಕ್ಷದ ನಾಯಕರು ಪರಸ್ಪರ ಮಾತುಕತೆ ಆರಂಭಿಸಿದ್ದಾರೆ. ಇದೊಂದು ರೀತಿ ಮೈತ್ರಿಕೂಟದ ನಾಯಕರ ಸಮಾಗಮ ಇದ್ದಂತೆ ಆಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಕೂಟದ ಅಭ್ಯರ್ಥಿಯನ್ನಾಗಿ ಎ.ಪಿ.ರಂಗನಾಥ್‌ ಅವರನ್ನು ಜೆಡಿಎಸ್‌ ಏಕಪಕ್ಷೀಯ ವಾಗಿ ಘೋಷಿಸಿದೆ ಎಂಬುದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ ಬಿಜೆಪಿ ಕೂಡ ಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥನಾರಾಯಣ ಗೌಡ ಇಲ್ಲವೇ ಸಪ್ತಗಿರಿಗೌಡ ಅವರನ್ನು ಕಣಕ್ಕಿಳಿಸುವ ಬಗ್ಗೆ ಇರಾದೆ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ಉಭಯ ಪಕ್ಷಗಳಲ್ಲಿ ತುಸು ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ನಾಯಕರು ಅಸಮಾಧಾನವನ್ನು ತಣಿಸುವ ಉದ್ದೇಶದಿಂದ ನಡೆಸಿದ ಸಭೆ ಯಶಸ್ವಿಯಾಗಿದೆ.

ಸಭೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್‌ ಸ್ಪರ್ಧೆಗೆ ಬಿಜೆಪಿ ಒಪ್ಪಿಕೊಂ ಡಿದೆ. ಆದರೆ ಉಳಿದ ಪರಿಷತ್‌ ಕ್ಷೇತ್ರಗಳ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆಗೆ ಮುನ್ನ ಪರಸ್ಪರ ಸಮಾಲೋಚನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Advertisement

ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂಗಳಾದ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಪ್ರಮುಖರಾದ ಜಿ.ಟಿ.ದೇವೇಗೌಡ, ನಿಖೀಲ್‌ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್‌ ಭಾಗವಹಿಸಿದ್ದರು.

ಅಭ್ಯರ್ಥಿ ಗೊಂದಲ ಇಲ್ಲ: ಬಿವೈವಿ
ವಿಧಾನ ಪರಿಷತ್ತಿನ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಯಾವುದೇ ಗೊಂದಲ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಂಬಂಧ ಮುಂದಿನ ದಿನಗಳಲ್ಲಿ ವರಿಷ್ಠರು ಚರ್ಚಿಸಲಿ¨ªಾರೆ. ಸದ್ಯ ನಾವು ವಿಧಾನಪರಿಷತ್‌ ಚುನಾವಣೆ ಸಂಬಂಧ ಚರ್ಚಿಸಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್‌ನ ಹಿರಿಯರು ಸಭೆ ಸೇರಿ ವಿಧಾನಪರಿಷತ್‌ ಉಪ ಚುನಾವಣೆ, ವಿಧಾನ ಪರಿಷತ್ತಿನ ಉಳಿದ 6 ಸ್ಥಾನಗಳ ಚುನಾವಣೆ ಕುರಿತು ಚರ್ಚಿಸಿದ್ದೇವೆ. ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಚರ್ಚಿತ ಅಂಶಗಳ ಕುರಿತಂತೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ
ವಿಧಾನ ಪರಿಷತ್‌ಗೆ ಸೀಮಿತವಾಗಿ ನಾವು ಚರ್ಚಿಸಿದ್ದೇವೆ. ಚರ್ಚೆಯ ವಿಚಾರವನ್ನು ದಿಲ್ಲಿಗೆ ತಲುಪಿಸುತ್ತೇವೆ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಮೊದಲ ಹಂತದಲ್ಲಿ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಸಭೆ ನಡೆಸಿದ್ದೇವೆ. ವಿಧಾನ ಪರಿಷತ್‌ ಉಪ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿದ್ದೇವೆ. ಚರ್ಚೆಯ ಮಾಹಿತಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನೀಡುತ್ತೇವೆ. ಮೋದಿ ಅವರ ಕೈ ಬಲಪಡಿಸಲು ಇಲ್ಲಿಂದಲೇ ಸಂದೇಶ ಕೊಡುತ್ತೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next