Advertisement

ಮೇಲ್ಮನೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಪಣ

11:33 PM May 26, 2024 | Team Udayavani |

ಬೆಂಗಳೂರು: ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಜೂ. 3ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣ ಕಣ ರಂಗೇರುತ್ತಿದ್ದು, ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಜಂಟಿ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿದ್ದಾರೆ.

Advertisement

ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ಚುನಾವಣೆಯಲ್ಲಿ ಹಣ-ಆಡಳಿತದ ಪ್ರಭಾವದಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಅಂದುಕೊಂಡಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಜನರು ಮೋದಿ ಅವರಿಗೆ ಮತ್ತೂಮ್ಮೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಶಾಸಕ ಟಿ.ಎಸ್‌. ಶ್ರಿವತ್ಸ, ವಿಧಾನಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಮಾಜಿ ಶಾಸಕ ಸಾ.ರಾ. ಮಹೇಶ್‌, ಎಲ್‌. ನಾಗೇಂದ್ರ, ಸಿ,ಎಸ್‌. ನಿರಂಜನಕುಮಾರ್‌, ಮಾಜಿ ಸಂಸದ ಸಿ.ಎಚ್‌. ವಿಜಯ್‌ ಶಂಕರ್‌ ಸೇರಿ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಪಾಲ್ಗೊಂಡು ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಸಮಾಲೋಚನೆ ನಡೆಸಿದರು.

ಒಗ್ಗಟ್ಟಿನ ಹೋರಾಟ ಅಗತ್ಯ
ಬೆಂಗಳೂರು ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪಾಲ್ಗೊಂಡು, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮ ವಹಿಸುವಂತೆ ಕರೆ ನೀಡಿದರು. ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಪಾಲ್ಗೊಂಡು, ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಬಿಜೆಪಿ -ಜೆಡಿಎಸ್‌ ಸರಕಾರ ಇದ್ದಾಗ ರಾಜ್ಯದಲ್ಲಿ ಸುವರ್ಣಯುಗವಿತ್ತು ಎಂದರೆ ತಪ್ಪಾಗಲ್ಲ. ಶಿಕ್ಷಕರಿಗೆ ವೇತನ ಆಯೋಗವನ್ನು ಜಾರಿಗೆ ತರಲಾಯಿತು. ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಮೀಸಲಿಟ್ಟಿದ್ದರು. ಕೋವಿಡ್‌ ವೇಳೆ ಯಾವ ಶಿಕ್ಷಕರ ಸಂಬಳವನ್ನೂ ಕಡಿತ ಮಾಡಲಿಲ್ಲ. ಆದರೆ ಇಂದಿನ ಕಾಂಗ್ರಸ್‌ ಸರಕಾರಕ್ಕೆ ಆ ಕಳಕಳಿ ಇಲ್ಲ, ಆಸಕ್ತಿಯೂ ಇಲ್ಲ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ಮುಂದಿನ ವಿಧಾನಸಭೆ ಚುನಾವಣೆವರೆಗೂ ಬಿಜೆಪಿ-ಜೆಡಿಎಸ್‌ನವರು ಒಂದಾಗಿದ್ದರೆ ನಮಗೆ ಉಳಿಗಾಲ ಇಲ್ಲ ಎನ್ನುವುದು ಕಾಂಗ್ರೆಸ್‌ನ ಹೆದರಿಕೆ. ಇದೇ ಕಾಂಗ್ರೆಸ್‌ ಪಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿತ್ತು. ಕೆಲಸ ಆಗಬೇಕಾದರೆ ಕೈ ಎತ್ತು, ಕೆಲಸ ಆದ ಮೇಲೆ ಚೂರಿ ಹಾಕು ಇದೇ ಕಾಂಗ್ರೆಸ್‌ ನೀತಿ.
– ಆರ್‌. ಅಶೋಕ್‌, ವಿಪಕ್ಷ ನಾಯಕ

ಗ್ಯಾರಂಟಿಗಳಿಂದ ಜನರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿರುವ ಈ ಸರಕಾರಕ್ಕೆ ಅನ್ನಭಾಗ್ಯದ 175 ರೂ. ಕೊಡುವ ಯೋಗ್ಯತೆ ಇಲ್ಲ. 2-3 ತಿಂಗಳಿಂದ ಹಣ ಕೊಟ್ಟಿಲ್ಲ, ಹಾಲು ಉತ್ಪಾದಕರ ಸಹಾಯಧನ ಕೊಟ್ಟಿಲ್ಲ, ಮಳೆ ಬರುತ್ತಿದೆ, ಬಿತ್ತನೆ ಬೀಜ ದುಬಾರಿ ಆಗಿದೆ. ಬಿತ್ತನೆ ಬೀಜದ ಬೆಲೆ ಶೇ. 75 ಏರಿಸಲಾಗಿದ್ದು ರೈತರ ಬದುಕನ್ನು ಕಗ್ಗತ್ತಲಿಗೆ ತಳ್ಳಲಾಗಿದೆ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಕಾಂಗ್ರೆಸ್‌ 136 ಮಂದಿ ಶಾಸಕರಿದ್ದು, ಅವರು ಏನು ಹೇಳುತ್ತಾರೋ ಅದೇ ನಡೆಯುತ್ತಿದೆ. ಸಿಎಂ, ಡಿಸಿಎಂ ಮಾತು ಅಂತಿಮವಾಗುತ್ತದೆ. ನಮಗೆ ಸಂಖ್ಯಾಬಲವಿಲ್ಲ. ನಾವು ಕಷ್ಟಕಾಲದಲ್ಲಿ ಇದ್ದೇವೆ. ಆದ್ದರಿಂದ ಅವರ ಮುಂದೆ ನಾವು ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ.
-ಜಿ.ಟಿ. ದೇವೇಗೌಡ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next