Advertisement
ಒಂದು ಕಡೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈ ತಪ್ಪಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ರಾಜಕೀಯ ರಣತಂತ್ರದ ರೂಪಿಸುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಓಡಾಡುವ ಮೂಲಕ ಚುನಾವಣೆಗೆ ತಾಲೀಮು ಮಾಡುತ್ತಿರುವಾಗಲೇ ತೆನೆ, ಕಮಲದ ಮೈತ್ರಿ ಮುನ್ನೆಲೆಗೆ ಬಂದಿದೆ.
Related Articles
Advertisement
ಯಾರಿಗೆ ಒಲಿಯುತ್ತೆ ಕ್ಷೇತ್ರ: ರಾಜ್ಯ ರಾಜಕಾರಣದಲ್ಲಿ ಒಂದರೆಡು ದಿನಗಳಿಂದ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಾಗಲೇ ಒಂದು ವೇಳೆ ಮೈತ್ರಿ ಏರ್ಪಪಟ್ಟರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯಾವ ಪಕ್ಷಕ್ಕೆ ಒಲಿಯಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕೀಯ ಹಿನ್ನೋಟ ಗಮನಿಸಿದರೆ ಜೆಡಿಎಸ್ ಪಕ್ಷ ಎಂದೂ ಖಾತೆ ತೆರೆದಿಲ್ಲ. 1996 ರಲ್ಲಿ ಒಮ್ಮೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಆರ್.ಎಲ್.ಜಾಲಪ್ಪ ಗೆಲುವು ಸಾಧಿಸಿದ್ದರು. ಆದರೆ, 2014 ರಲ್ಲಿ ಮೋದಿ ಅಲೆ ಇದ್ದರೂ ಕಾಂಗ್ರೆಸನ ಎಂ.ವೀರಪ್ಪ ಮೊಯ್ಲಿ ಗೆಲುವು ಸಾಧಿಸಿದ್ದರು. ಆದರೆ 2019 ರಲ್ಲಿ ಮೊಯ್ಲಿ ವಿರೋಧಿ ಅಲೆಯಲ್ಲಿ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸಿದ್ದರು. ಆದರೆ ಬಚ್ಚೇಗೌಡ ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿರುವುದರಿಂದ ಮೈತ್ರಿ ಆದರೆ ಬಿಜೆಪಿಗೆ ಕ್ಷೇತ್ರ ಸಿಗುತ್ತಾ? ಇಲ್ಲ ಜೆಡಿಎಸ್‌ಗೆ ಸಿಗುತ್ತಾ ಎನ್ನುವ ಚರ್ಚೆ ಜತೆಗೆ ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವ ಚರ್ಚೆ ಮಾತ್ರ ಜಿಲ್ಲಾದ್ಯಂತ ಬಿರುಸುಗೊಂಡಿದೆ.
2019ರಲ್ಲೂ ಮೈತ್ರಿ ರಾಜಕಾರಣಕೆ ಸೋಲು: 2019ರಲ್ಲಿ ಎದುರಾದ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮೂಲಕ ರಾಜ್ಯದಲ್ಲಿ ಲೋಕ ಸಭಾ ಚುನಾವಣೆ ಎದುರಿಸಿದರೂ ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಯಿತು. ಅದರಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಲಾಭವಾಗದೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಎನ್.ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದರು.
ಮೈತ್ರಿ ವಿಚಾರದ ಬಗ್ಗೆ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದ್ದೇನು?: ಬಿಜೆಪಿ, ಜೆಡಿಎಸ್ ಮೈತ್ರಿ ನನಗೆ ಅಚ್ಚರಿ ಮೂಡಿಸುತ್ತಿದೆ. ಜಾತ್ಯಾತೀತವಾಗಿರುವ ಜೆಡಿಎಸ್ ಪಕ್ಷ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಆಗುತ್ತಿರುವುದು ನನಗೂ ಅಚ್ಚರಿ ಮೂಡಿಸಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಆಗುವ ಅನುಮಾನ ಕೇಳಿ ಬಂದಿತ್ತು. ಈಗ ಜನರಿಗೆ ಅದು ಸ್ಪಷ್ಟವಾಗಿದೆ. ಆದರೂ ಮೈತ್ರಿಯಿಂದ ರಾಜಕೀಯವಾಗಿ ಬಿಜೆಪಿಗೆ ಒಳ್ಳೆಯದು ಆಗುವುದಿಲ್ಲ. ಶಕ್ತಿನು ಬರಲ್ಲ. ಇನ್ನೂ ಅದರ ಶಕ್ತಿ ಕ್ಷೀಣಿಸುತ್ತದೆ. 2024 ರಲ್ಲಿ ಚುನಾವಣೆ ಇರುವುದರಿಂದ ಈಗಲೇ ಯಾವ ಕ್ಷೇತ್ರ ಬಿಟ್ಟು ಕೊಡಬೇಕು, ಏನು ಅಂತ ಈಗಲೇ ಎಲ್ಲಾವನ್ನು ತೀರ್ಮಾನ ಮಾಡಲಿಕ್ಕ ಆಗಲ್ಲ ಎಂದು ಕ್ಷೇತ್ರದ ಹಾಲಿ ಬಿಜೆಪಿಯಿಂದ ಆಯ್ಕೆಗೊಂಡಿರುವ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದರಲ್ಲದೇ ಬಹಿರಂಗವಾಗಿ ಮೈತ್ರಿ ವಿಚಾರಕ್ಕೆ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಎಚ್ಡಿಕೆ ಭೇಟಿ ಮಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್: ಇತ್ತೀಚೆಗೆ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್, ಶುಕ್ರವಾರ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಆರೋಗ್ಯ ವಿಚಾರಿಸಲಿಕ್ಕೆ ಸುಧಾಕರ್ ಭೇಟಿ ನೀಡಿದರೂ ಸದ್ಯದ ರಾಜ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬಿಜೆಪಿ, ಜೆಡಿಎಸ್ ನಡುವಿನ ಮೈತ್ರಿ ವಿಚಾರ ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲಿ ಸುಧಾಕರ್ -ಕುಮಾರಸ್ವಾಮಿ ಭೇಟಿ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಒಲವು ತೋರಿದ್ದು ಜೆಡಿಎಸ್, ಬಿಜೆಪಿ ಮೈತ್ರಿ ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತನಗೆ ನೀಡಬೇಕೆಂದು ಈಗಾಗಲೇ ಸುಧಾಕರ್ ಪಟ್ಟು ಹಿಡಿದಿದ್ದಾರೆ. ಎನ್ನಲಾಗಿದೆ.
ಒಂದು ವೇಳೆ ಬಿಜೆಪಿ ಟಿಕೆಟ್ ಕೈ ತಪ್ಪಿದರೂ ಸುಧಾಕರ್ ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ಅಭ್ಯರ್ಥಿ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಷ್ಟೇ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಹೊಂದಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಜೆಡಿಎಸ್ ಮೈತ್ರಿ ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಯಾವ ಪಕ್ಷಕ್ಕೆ ಒಲಿಯಲಿದೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್‌ರನ್ನು ಸೋಲಿಸಲು ಬಹಿರಂಗವಾಗಿಯೆ ಕಾಂಗ್ರೆಸ್‌ಗೆ ಸಹಾಯ ಮಾಡಿದ್ದ ಸ್ಥಳೀಯ ಜೆಡಿಎಸ್ ನಾಯಕರು ಒಂದು ವೇಳೆ ಮತ್ತೆ ಸುಧಾಕರ್ ಲೋಕಸಮರಕ್ಕೆ ನಿಂತರೆ ಪಕ್ಷದ ಮೈತ್ರಿ ಧರ್ಮ ಪಾಲಿಸುತ್ತಾರಾ ಎನ್ನುವ ಮಾತು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಹಾಲಿ ಪ್ರಧಾನಿ ಮಂತ್ರಿಗಳನ್ನ ಆಗಾಗ ಮಾಜಿ ಪ್ರಧಾನಿಗಳು ಭೇಟಿ ಮಾಡುವುದು ಸಹಜ. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದೆ. ಆದರೆ ಮೈತ್ರಿ ವಿಚಾರ ಅಧಿಕೃತವಾಗಿ ಘೋಷಣೆ ಆದಾಗ ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತ. ಈಗಲೇ ಸ್ಪಷ್ಟತೆ ಇಲ್ಲದೇ ಉಹಾಪೋಹದ ಬಗ್ಗೆ ಮಾತನಾಡುವುದು ಬೇಡ. ● ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು. ಚಿಕ್ಕಬಳ್ಳಾಪುರ.
-ಕಾಗತಿ ನಾಗರಾಜಪ್ಪ