ವಿಜಯಪುರ: ಲೋಕಸಭೆ ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ವಿಜಯಪುರ ಜಿಲ್ಲಾ ಜೆಡಿಎಸ್ ಘಟಕ ಸಮ್ಮತಿ ಸೂಚಿಸಿದ್ದು, ರಾಜಕೀಯ ಹೊಂದಾಣಿಕೆಯನ್ನು ಮುಕ್ತವಾಗಿ ಸ್ವಾಗತಿಸಿದೆ.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ದಿಲಾವರ್ ಖಾಜಿ ನೇತೃತ್ವದಲ್ಲಿ ನಗರದಲ್ಲಿರುವ ಪಕ್ಷದ ಕಛೇರಿಯಲ್ಲಿ ಅಲ್ಪಸಂಖ್ಯಾತ ಘಟಕದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷಕ್ಕೆ ದೊರೆಯುವ ಸ್ಥಾನಗಳು ಮಾತ್ರವಲ್ಲದೇ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಏಜಾಜ ಅಹ್ಮದ ಮುಕಬೀಲ್ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಜೆಡಿಎಸ್ ವರಿಷ್ಢರಾದ ಮಾಜಿ ಪ್ರಧಾನಿ ದೇವೇಗೌಡ ಅವರ ಕೊಡುಗೆ ಅನುಪಮ. ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಶೇ.4 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಕಲ್ಪಿಸಿದ್ದನ್ನು ಅಲ್ಪಸಂಖ್ಯಾತರು ಮರೆಯಬಾರದು ಎಂದಿದ್ದಾರೆ.
ಇದಲ್ಲದೇ ಮುಖ್ಯಮಂತ್ರಿ ಆಗಿದ್ದಾಗಲೆಲ್ಲ ಪಕ್ಷದ ವರಿಷ್ಠನಾಯಕರಾದ ಎಚ್.ಡಿ.ಕುಮಾರಸ್ವಾಮಿ ಜನಪರ ಯೋಜನೆಗಳ ಜಾರಿಯ ಮೂಲಕ ಎಲ್ಲ ವರ್ಗದ ವರ್ಗದ ಜನ ಹಿತ ಕಾಯುವಲ್ಲಿ ಮುಂದಾಗಿದ್ದರು. ರೈಥರ ಸಾಲ ಮನ್ನಾ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸುವ ಮೂಲಕ ಅಲ್ಪಸಂಖ್ಯಾತರಿಗೆ ವಿಶೇಷ ಆಧ್ಯತೆ ನೀಡಿದ್ದನ್ನು ಸ್ಮರಿಸಿದರು.
ಈ ವೇಳೆಯಲ್ಲಿ ಜೆಡಿಎಸ್ ಉಪಾಧ್ಯಕ್ಷ ಹುಸೇನ ಬಾಗಾಯತ, ಸಾಜೀದ ರಿಸಾಲದಾರ, ಮುಕ್ಕದಸ್ ಇನಾಮದಾರ, ಜಾಕೀರ ಅಮೀನಗಡ, ಜಾಫರ ಕಲಾದಗಿ, ವಾಜೀದ ಖಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.