Advertisement
ದಸರಾ ಹಬ್ಬದ ನಂತರ ಸ್ಥಾನಗಳ ವಿನಿಮಯ ಆಗಲಿದೆ ಎನ್ನುವ ವಿಶ್ವಾಸದಲ್ಲಿ ಜೆಡಿಎಸ್ ಇತ್ತು. ಆದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಮಗ್ನರಾಗಿದ್ದು, ಸದ್ಯಕ್ಕೆ ಜೆಡಿಎಸ್ ಜತೆಗೆ ಸ್ಥಾನ ಹಂಚಿಕೆಯ ಮಾತುಕತೆ ನಡೆಸುವ ಲಕ್ಷಣಗಳಿಲ್ಲ.
Related Articles
Advertisement
ಬಿಜೆಪಿಯಿಂದ ರಕ್ಷಣಾತ್ಮಕ ಹೆಜ್ಜೆ: ದೆಹಲಿ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆದಿದ್ದರೂ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ರಾಜ್ಯ ನಾಯಕರು ತಲೆ ಬಿಸಿ ಮಾಡಿಕೊಂಡಿದ್ದಾರೆ.
ಸ್ಥಳೀಯ ನಾಯಕರನ್ನು ಬಿಟ್ಟು ವರಿಷ್ಠರೇ ಕ್ಷೇತ್ರ ಹಂಚಿಕೆಯನ್ನೂ ಮಾಡಿದರೆ, ಒಪ್ಪಿಕೊಂಡು ಕೆಲಸ ಮಾಡುವುದು ಕಷ್ಟವಾಗಬಹುದು ಎಂಬ ಆತಂಕವೂ ಇದೆ. ಹೀಗಾಗಿ ನಿರೀಕ್ಷಣಾತ್ಮಕವಾಗಿ ಕೆಲ ಲೋಕಸಭಾ ಕ್ಷೇತ್ರಗಳನ್ನು ಪಟ್ಟಿ ಮಾಡಿ ಕೊಡುವುದು ಲೇಸು ಎಂಬ ಚಿಂತನೆಯಿದೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎನ್ನುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಸುಳಿವು ಇರುವುದರಿಂದ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟ ನಿಲುವಿಗೆ ಬರಲಾಗುತ್ತಿಲ್ಲ. ಬಿಜೆಪಿ ಗೆದ್ದಿರುವ 25 ಕ್ಷೇತ್ರಗಳನ್ನು ಬಿಟ್ಟು, ಜೆಡಿಎಸ್ ಭದ್ರಕೊಟೆ ಎನಿಸಿರುವ ಹಾಸನ, ಮಂಡ್ಯ ಕ್ಷೇತ್ರಗಳನ್ನು ಬಿಟ್ಟುಕೊಟ್ಟು, ಸಂಸದ ಡಿ.ಕೆ.ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಅಥವಾ ಚಿಕ್ಕಬಳ್ಳಾಪುರವನ್ನು ಜೆಡಿಎಸ್ ಕೈಗಿಡುವ ರಕ್ಷಣಾತ್ಮಕ ಹೆಜ್ಜೆ ಇಡುವ ಚಿಂತನೆಗಳನ್ನೂ ನಡೆಸುತ್ತಿದೆ.
ಯಾರಾಗಲಿದ್ದಾರೆ ಹಾಸನದ ದಳಪತಿ?ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಸಂಸದರಾಗಿರುವ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ಜೆಡಿಎಸ್‌ನ್ನು ಬಿಜೆಪಿ ಬೆಂಬಲಿಸಬೇಕಾಗಬಹುದು. ಪ್ರಜ್ವಲ್ ರೇವಣ್ಣ ಅವರೇ ಮತ್ತೆ ಸ್ಪರ್ಧಿಸುತ್ತಾರೋ ಅಥವಾ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಸ್ಪರ್ಧಿಗಿಳಿಯುತ್ತಾರಾ? ಇಬ್ಬರ ಬದಲು ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸುತ್ತಾರಾ ಕಾದು ನೋಡಬೇಕಿದೆ. ನಿಖಿಲ್ ಅದೃಷ್ಟ ಪರೀಕ್ಷೆ, ಪ್ರಜ್ವಲ್‌ಗೂ ಸ್ಥಾನ
ಮಂಡ್ಯದಲ್ಲಿ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯೆ ಸುಮಲತಾರನ್ನು ಮತ್ತೆ ಬೆಂಬಲಿಸಬೇಕೇ ಬೇಡವೇ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಬಿಜೆಪಿ ಇದೆ. ಜೆಡಿಎಸ್‌ಗೆ ಬೆಂಬಲಿಸಿದರೆ, ಸ್ಪರ್ಧಿ ಯಾರು ಎಂಬುದು ಇನ್ನೂ ನಿಗೂಢವಾಗಿದೆ. ಹಿಂದೆ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಮತ್ತೆ ಪರೀಕ್ಷೆಗೆ ಒಡ್ಡಿಕೊಳ್ಳಲಿದ್ದಾರೆಯೇ ಎಂಬುದು ಗೊತ್ತಿಲ್ಲ. ಆದರೆ, ಪ್ರಜ್ವಲ್‌ರನ್ನು ಮಂಡ್ಯದಿಂದ ಕಣಕ್ಕಿಳಿಸುವ ಪ್ಲಾನ್ ಸಹ ಇದೆ. ಡಿ.ಕೆ. ಸುರೇಶ್ ವಿರುದ್ಧ ಕಣಕ್ಕಿಳಿಯಲಿದ್ದಾರೆಯೇ ಎಚ್‌ಡಿಕೆ?
ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್‌ರನ್ನು ಮಣಿಸಲು ಬಿಜೆಪಿ-ದಳ ಟೊಂಕ ಕಟ್ಟಿ ನಿಲ್ಲಲಿದ್ದು, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಹಾಗೂ ರಾಮನಗರ ಶಾಸಕರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಕೂಡ ಜಂಟಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಕುಮಾರಸ್ವಾಮಿ ಅವರೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟರೂ ಅಚ್ಚರಿಯಿಲ್ಲ. ಕೋಲಾರವೋ, ಚಿಕ್ಕಬಳ್ಳಾಪುರವೋ?
ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಇದ್ದಾರೆ. ಸ್ವಂತ ವರ್ಚಸ್ಸಿನಿಂದ ಗೆಲ್ಲುವುದು ಸುಲಭವಿಲ್ಲ. ಚಿಕ್ಕಬಳ್ಳಾಪುರದಲ್ಲೂ ಬಿಜೆಪಿಗೆ ಅಭ್ಯರ್ಥಿ ಸಿಗುವುದು ಕಷ್ಟವಿದೆ. ಹೀಗಾಗಿ ಎರಡರಲ್ಲಿ ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ತಯಾರಿದೆ. ದೇವನಹಳ್ಳಿ ಶಾಸಕರಾಗಿದ್ದ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಟ್ಟರೆ, ಬಿಜೆಪಿ ಸಹ ಬೆಂಬಲಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ತುಮಕೂರು ಕೇಳುತ್ತಿರುವ ಜೆಡಿಎಸ್
ಬಿಜೆಪಿ ಸಂಸದ ಬಸವರಾಜು ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಪ್ರಕಟಸಿದ್ದಾರೆ. ಹೀಗಾಗಿ ಲಿಂಗಾಯತ ಮತಪ್ರಭಾವ ಇರುವ ತುಮಕೂರಿನಲ್ಲಿ ಒಕ್ಕಲಿಗ ಮತವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದುಕೊಂಡಿರುವ ಜೆಡಿಎಸ್, ತುಮಕೂರಿನಲ್ಲಿ ಜಂಟಿ ಹೊರಾಟಕ್ಕೆ ಬೇಡಿಕೆ ಇಡಬೇಕೆಂದಿದೆ. ಹಾಗೊಂದು ವೇಳೆ ತುಮಕೂರು ಬಿಟ್ಟುಕೊಟ್ಟರೆ ದೇವೇಗೌಡರು ಮರು ಸ್ಪರ್ಧೆ ಸಾಧ್ಯತೆ. ಸೋತ ಕ್ಷೇತ್ರದಿಂದಲೇ ಗೆದ್ದು ಕಾಂಗ್ರೆಸ್‌ಗೆ ಟಾಂಗ್ ಕೊಡಬೇಕೆಂಬ ಇರಾದೆ. ಆದರೆ, ತನ್ನ ತೆಕ್ಕೆಯಲ್ಲಿರುವ ತುಮಕೂರನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪುವ ಯಾವ ಲಕ್ಷಣಗಳೂ ಇಲ್ಲ.