Advertisement

BJP-JDS Allaince: ಹೋರಾಟದ ಯಾತ್ರೆಗೆ ದೋಸ್ತಿ ಸಿದ್ಧತೆ

02:08 AM Jul 28, 2024 | Team Udayavani |
ಬೆಂಗಳೂರು:  ರಾಜ್ಯ ಸರಕಾರವು ಮುಡಾ, ವಾಲ್ಮೀಕಿ ಮತ್ತಿತರ ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ವಿಪಕ್ಷ ಗಳಾದ ಬಿಜೆಪಿ-ಜೆಡಿಎಸ್‌ ಈಗಾಗಲೇ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ, ಹೋರಾಟ ಸಂಘಟಿಸುತ್ತ ಬಂದಿವೆ. ಜತೆಗೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಪಟ್ಟು ಹಿಡಿದಿವೆ. ಈಗ ಮುಡಾ ಹಗರಣ ಸಂಬಂಧ ಸಿಎಂ ತಲೆದಂಡಕ್ಕೆ ಆಗ್ರಹಿಸಿ ಮೈತ್ರಿ ವಿಪಕ್ಷಗಳು ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿನ ವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ದಿನಾಂಕ ನಿಗದಿಯಾಗಿದೆ. ಆ. 3ರಿಂದ ಒಂದು ವಾರ ಕಾಲ ಜಂಟಿ ಪಾದಯಾತ್ರೆ ನಡೆಸಲು ಮುಂದಡಿ ಇರಿಸಿವೆ.

“ಭ್ರಷ್ಟ ಸಿಎಂ-ಭ್ರಷ್ಟ ಕಾಂಗ್ರೆಸ್‌ ತೊಲಗಿಸಿ’ ಎಂಬ ಘೋಷವಾಕ್ಯದಡಿ ಹಳೇ ಮೈಸೂರು ಭಾಗ ದಲ್ಲಿ ರಾಜ್ಯ ಸರಕಾರದ ವಿರುದ್ಧ ಜಂಟಿ ಹೋರಾಟ ನಡೆಸುವುದಕ್ಕೆ ಎಲ್ಲ ಸಿದ್ಧತೆಗಳು ಬಹು ಪಾಲು ಮುಕ್ತಾಯ ಗೊಂಡಿವೆ. ರವಿವಾರ ಅಪರಾಹ್ನ 3 ಗಂಟೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಎರಡೂ ಪಕ್ಷಗಳ ಸಮನ್ವಯ ಬೈಠಕ್‌ ನಡೆಯ ಲಿದ್ದು, ಇದರಲ್ಲಿ ಹೋರಾಟದ ಸ್ವರೂಪಕ್ಕೆ ಅಂತಿಮ ರೂಪ ನೀಡಲಾಗುತ್ತದೆ. ಕೇಂದ್ರ ಸಚಿವ ರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್‌ ಜೋಶಿ ಈ ಸಭೆಯಲ್ಲಿ ವಿಶೇಷ ಆಹ್ವಾನಿತ  ರಾಗಿ ಭಾಗಿಯಾಗಲಿದ್ದಾರೆ. ಅವರಿಬ್ಬರ ಸಮ್ಮುಖ ದಲ್ಲಿ ಅಧಿಕೃತವಾಗಿ ದಿನಾಂಕ ಘೋಷಣೆ ಆಗ  ಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಧಿವೇಶನ ಸಂದರ್ಭದಲ್ಲೇ ಪಾದಯಾತ್ರೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದರು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಬಿಜೆಪಿ ಕಚೇರಿಯಲ್ಲಿ ನಿರಂತರ ಸಿದ್ಧತೆ, ಸಭೆ ನಡೆಯುತ್ತಿದೆ.
ಶಕ್ತಿ ಪ್ರದರ್ಶನಕ್ಕೆ ಸೂಕ್ತ ವೇದಿಕೆ
ಏಳು ದಿನಗಳ ಪಾದಯಾತ್ರೆ ಸಂಪೂರ್ಣವಾಗಿ ರಾಜಕೀಯ ಸ್ವರೂಪದ್ದಾಗಿರಲಿದ್ದು, ಜೆಡಿಎಸ್‌ನ ಸಂಘಟನಾತ್ಮಕ ಬಲವನ್ನು ಯಶಸ್ವಿಯಾಗಿ ಬಳಸಿ ಕೊಳ್ಳಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪಾದಯಾತ್ರೆ ಸಾಗುವ ದಾರಿ ಒಕ್ಕಲಿಗರೇ ಹೆಚ್ಚಿರುವ ಭಾಗ ಆಗಿರುವುದರಿಂದ ಬಿಡದಿ, ಚನ್ನಪಟ್ಟಣ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ದಲ್ಲಿ ಎರಡೂ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು.

ಈ ಪಾದಯಾತ್ರೆ ಮುಂದಿನ ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆ ಜತೆಗೆ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ವಿರುದ್ಧ ಜನಾಭಿಪ್ರಾಯ ತೀವ್ರಗೊಳಿಸುವಂತಿರಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ರವಿವಾರ ನಡೆಯುವ ಸಮನ್ವಯ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಸಂಘಟನೆ ಚಟುವಟಿಕೆಯನ್ನು ಚುರುಕುಗೊಳಿಸಲಾಗಿದೆ.
ಆ. 10ರಂದು ಮೈಸೂರಿನಲ್ಲಿ ಸಮಾರೋಪ ಸಭೆ
ಪಾದಯಾತ್ರೆ ಎಲ್ಲಿಂದ ಪ್ರಾರಂಭವಾಗಬೇಕು? ಯಾವ ಯಾವ ತಾಲೂಕುಗಳಲ್ಲಿ ಕಿರು ಸಭೆಗಳನ್ನು ನಡೆಸಬೇಕು? ದಿನಕ್ಕೆ ಎಷ್ಟು ಕಿ.ಮೀ. ನಡೆಯಬೇಕು, ಪ್ರತಿದಿನದ ಪಾದಯಾತ್ರೆ ಆರಂಭವಾಗುವ ಹಾಗೂ ಅಂತ್ಯವಾಗುವ ಸ್ಥಳಗಳಲ್ಲಿ ಯಾರ್ಯಾರು ಮಾತನಾಡಬೇಕೆಂಬ ಬಗ್ಗೆ ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಆ. 10ರಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ಪಾದಯಾತ್ರೆ ರೂಪುರೇಷೆ
“ಭ್ರಷ್ಟ ಸಿಎಂ-ಭ್ರಷ್ಟ ಕಾಂಗ್ರೆಸ್‌ ತೊಲಗಿಸಿ’ ಘೋಷವಾಕ್ಯದಡಿ
ಮೈತ್ರಿ ಪಕ್ಷ ಹೆಜ್ಜೆ

ಹಳೇ ಮೈಸೂರು ಭಾಗದಲ್ಲಿ ಸರಕಾರದ ವಿರುದ್ಧ “ಜಂಟಿ ಹೋರಾಟ’

ರವಿವಾರ ಬೆಂಗಳೂರಿನಲ್ಲಿ ಬಿಜೆಪಿ- ಜೆಡಿಎಸ್‌ ಮುಖಂಡರ, ಪ್ರಮುಖರ ಸಭೆ

ಯಾವ ತಾಲೂಕುಗಳಲ್ಲಿ ಕಿರು ಸಭೆ ಎಂಬ ಬಗ್ಗೆ ಇಂದು ತೀರ್ಮಾನ

ಸುನಿಲ್‌ ಕುಮಾರ್‌ ನೇತೃತ್ವದ ತಂಡದಿಂದ ಪಾದಯಾತ್ರೆ ರೂಪುರೇಷೆ ಅಂತಿಮ ಹಂತಕ್ಕೆ

ಸಮಾರೋಪಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಹ್ವಾನಿಸಲು ತೀರ್ಮಾನ
Advertisement
Advertisement

Udayavani is now on Telegram. Click here to join our channel and stay updated with the latest news.

Next