ಶಿವಮೊಗ್ಗ: ‘ಮೈತ್ರಿಗಳು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನಿವಾರ್ಯ ಹಾಗೂ ಅಗತ್ಯ.ಆ ರೀತಿಯ ವಾತಾವರಣ ಇತ್ತೀಚಿಗೆ ಕಂಡುಬರುತ್ತಿದೆ. ಇದರಿಂದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಯಾವುದೂ ಹೊರತಲ್ಲ’ ಎಂದು ಜೆಡಿಎಸ್ ನಾಯಕ, ಮಾಜಿ ಶಾಸಕ ವೈ.ಎಸ್. ವಿ ದತ್ತಾ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಿತ್ತು.ಈಗ ಕಾಂಗ್ರೆಸ್ ಪಕ್ಷದವರು ಇನ್ನೊಂದು ಮಹಾಮೈತ್ರಿಕೂಟ ಮಾಡಿಕೊಂಡಿದ್ದಾರೆ.ಅದಕ್ಕೆ ಜೆಡಿಎಸ್ ಪಕ್ಷವನ್ನು ಆಹ್ವಾನಿಸಿಲ್ಲ.ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆ ಇದೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹೊಂದಾಣಿಕೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ತೀರ್ಮಾನ ದೆಹಲಿಯಲ್ಲಿ ಆಗಬೇಕು. ಚರ್ಚೆ ನಡೆದಿರುವುದು ಅಂತೂ ಸತ್ಯ. ಕುಮಾರಸ್ವಾಮಿ ಅವರು ದೆಹಲಿಗೆ ಹೋದ ನಂತರ ತೀರ್ಮಾನ ಆಗುತ್ತದೆ’ ಎಂದರು.
ಜೆಡಿಎಸ್ ಯಾವಾಗಲೂ ಬಿಜೆಪಿ- ಕಾಂಗ್ರೆಸ್ ಪಕ್ಷಗಳನ್ನು ಸಮಾನ ದೂರದಲ್ಲಿಟ್ಟು ಹೋರಾಟ ಮಾಡಿಕೊಂಡು ಬಂದಿದೆ.ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಭಿನ್ನಾಭಿಪ್ರಾಯ ಮರೆತು ಹೋಗಬೇಕಾಗುತ್ತದೆ.ಅದು ಮೈತ್ರಿಯ ಧರ್ಮ ಕೂಡ ಹೌದು.ಈಗ ಯಾವ ಪಕ್ಷದಲ್ಲೂ ಕೂಡ ಸಿದ್ದಾಂತಗಳು ಉಳಿದಿಲ್ಲ.ಆಯಾಯ ಸಂದರ್ಭದಲ್ಲಿ ಅನುಕೂಲಕ್ಕೆ ತಕ್ಕ ರಾಜಕಾರಣ ನಡೆಯುತ್ತಿದೆ.ಸಿದ್ಧಾಂತಗಳು ಕೂಡ ಆಹಾರ ಧಾನ್ಯದ ರೀತಿ ಕಲಬೆರಕೆಯಾಗಿದೆ ಎಂದರು.
ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಪ್ರತಿಕ್ರಿಯಿಸಿ,’ಸರಕಾರ ಸ್ಪಷ್ಟವಾಗಿ ತೀರ್ಮಾನ ಮಾಡಬೇಕು.ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಬಿಡಬಾರದು.ಇದು ನಮ್ಮ ಪಕ್ಷದ ಸ್ಪಷ್ಟ ಅಭಿಪ್ರಾಯ ಕೂಡ ಹೌದು. ಜನತಾ ಪರಿವಾರದ ಸರಕಾರಗಳಿದ್ದ ಸಂದರ್ಭದಲ್ಲಿ ರಾಜ್ಯದ ನೆಲ,ಜಲ, ಭಾಷೆಯ ರಕ್ಷಣೆಗೆ ಕಟಿ ಬದ್ಧವಾಗಿದ್ದವು.ಸಿದ್ದರಾಮಯ್ಯನವರು 2005 ರ ವರೆಗೂ ಕೂಡ ಜನತಾ ಪರಿವಾರದ ಭಾಗವೇ ಆಗಿದ್ದರು’ ಎಂದರು.
‘ದೇವೇಗೌಡರಿಗೂ ಕಾವೇರಿ ಅಂದರೆ ಅವಿನಾಭಾವ ಸಂಬಂಧ ಇತ್ತು. ಹೋರಾಟ ಕೂಡ ಕೂಡ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಡಿಎಂಕೆ ಜತೆ ಮೈತ್ರಿ ಇದೆ. ಸ್ಟಾಲಿನ್ ಇದ್ದಾರೆ.ರಾಷ್ಟ್ರೀಯ ಪಕ್ಷಗಳು ಎಲ್ಲವೂ ಹಂಗಿನಲ್ಲೇ ಇರುತ್ತವೆ.ಆದರೆ, ಜೆಡಿಎಸ್ ಪಕ್ಷಕ್ಕೆ ಅರಸನ ಅಂಕಿ ಇಲ್ಲ, ದೆವ್ವದ ಕಾಟ ಇಲ್ಲ.ಎಲ್ಲಾ ಹೈಕಮಾಂಡ್ ಕರ್ನಾಟಕ ರಾಜ್ಯದಲ್ಲೇ ಇದೆ.ಆದರೆ, ಬಿಜೆಪಿ ಕಾಂಗ್ರೆಸ್ ಗೆ ಹಾಗಲ್ಲ,ಹೈಕಮಾಂಡ್ ದೆಹಲಿಯಲ್ಲಿದೆ.ದೆಹಲಿಯ ಮರ್ಜಿಗೆ, ರಾಷ್ಟ್ರೀಯ ಮೈತ್ರಿಗೆ ಒಳಗಾಗದೇ ರಾಜ್ಯದ ಹಿತಾಸಕ್ತಿ ಕಾಪಾಡಬೇಕು.ಈ ಮರ್ಜಿಗೆ ಒಳಗಾಗಿಯೇ ರಾಜಕ್ಕೆ ಕಾವೇರಿ ವಿಚಾರದಲ್ಲಿ ಪದೇಪದೇ ಅನ್ಯಾಯವಾಗುತ್ತಿದೆ’ ಎಂದರು.