ಬೆಂಗಳೂರು: ಬಿಜೆಪಿ ಮೈತ್ರಿ ಸರ್ಕಾರ ಬೀಳಿಸಲು ವ್ಯರ್ಥ ಕಸರತ್ತು ನಡೆಸುತ್ತಿದ್ದು, ಶಾಸಕರ ಖರೀದಿಗೆ ದಂಧೆಗಳ ಹಣವನ್ನು ಬಳಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ನನಗೂ ಗೊತ್ತಾಗಿದೆ ಬಿಜೆಪಿ ಯಾರನ್ನು ಬಳಸಿಕೊಳ್ಳುತ್ತಿದೆ ಎಂದು.ಹಣ ಎಲ್ಲಿ ಸಂಗ್ರಹ ಆಗಿದೆ, ಅದರ ಕಿಂಗ್ ಪಿನ್ ಯಾರು ಎನ್ನುವುದು ಗೊತ್ತಿದೆ. ನಾನೇನು ಸುಮ್ನೆ ಕೂರ್ತೀನಾ, ನಾನೂ ಸರ್ಕಾರ ಉಳಿಸಲು ಕಾನೂನು ದೃಷ್ಟಿಯಲ್ಲಿ ಯಾವ ಪ್ರಯತ್ನ ಮಾಡಬೇಕೊ ಅದನ್ನು ಮಾಡುತ್ತಿದ್ದೇನೆ’ ಎಂದರು.
ಕಾರ್ಪೋರೇಶನ್ ಕಚೇರಿಗೆ ಬೆಂಕಿ ಹಾಕಿ ಕಡತ ಸುಟ್ಟವರು, ಕಾಫಿ ಎಸ್ಟೇಟ್ ಮಾರಿ ಸ್ವಂತ ಹೆಂಡತಿ ಮಕ್ಕಳಿಗೆ ಗುಂಡಿಟ್ಟು ಕೊಂದವರು, ಇಸ್ಪಿಟ್ ದಂಧೆ ನಡೆಸುತ್ತಿದ್ದವರು ಶಾಸಕರ ಖರೀದಿಯ ಕಿಂಗ್‌ಪಿನ್‌ಗಳಾಗಿದ್ದಾರೆ ಎಂದು ಪರೋಕ್ಷವಾಗಿ ಪ್ಲಾಂಟರ್ ಗಣೇಶ್, ಹೊಂಬಾಳೆ ವಿಜಯ್, ನಾರ್ವೇ ಸೋಮಶೇಖರ್ ಜಯರಾಜ್, ಉದಯ್ ಗೌಡ ವಿರುದ್ಧ ಆರೋಪ ಮಾಡಿದರು.
ಬಿಜೆಪಿಯವರು ಸದ್ಯ ಅಡ್ವಾನ್ಸ್ ಪೇಮೆಂಟ್ ಮಾಡುತ್ತಿದ್ದಾರೆ. ಅವರು ರೆಸಾರ್ಟ್ ಆದರೂ ಮಾಡಲಿ, ಗುಡಿಸಲಾದರೂ ಮಾಡಲಿ ಎಂದರು.
ನನಗೂ ಬಿಜೆಪಿ ಶಾಸಕರ ಸಂಪರ್ಕ ಇದೆ ,ಆದರೆ ಮೈಸೂರು ಭಾಗದ ಶಾಸಕರನ್ನು ಟಚ್ ಮಾಡಲು ಹೋಗುವುದಿಲ್ಲ ಎಂದರು.
ಕಾಂಗ್ರೆಸ್‌ನವರು ಸೂಚಿಸಿದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ತಿಳಿಸಿದರು.