Advertisement

ಬಿಜೆಪಿ ಹರಾಮ್‌ಕೋರ್‌ ಪಕ್ಷ

08:09 AM Dec 09, 2017 | Team Udayavani |

ಬೆಳಗಾವಿ: “ಬಿಜೆಪಿ ಒಂದು ಹರಾಮ್‌ಕೋರ್‌ ಪಕ್ಷ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸದಂತೆ ಆದೇಶ ಮಾಡಿದೆ. ಭಾಗವಹಿಸಿದರೆ ಚುನಾವಣೆಯಲ್ಲಿ ಟಿಕೆಟ್‌ ಕೊಡುವುದಿಲ್ಲ ಎಂದು ಎಚ್ಚರಿಸಿದೆ’ ಎಂದು ಶಾಸಕ ಉಮೇಶ ಕತ್ತಿ ಸ್ವಪಕ್ಷವನ್ನೇ ನಿಂದಿಸಿ ವಿವಾದ ಸೃಷ್ಟಿಸಿದ್ದಾರೆ.

Advertisement

ಹುಕ್ಕೇರಿಯ ಕಮತನೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಬಿಜೆಪಿಯಲ್ಲಿ ಯಾರೂ ಸರಿಯಾಗಿಲ್ಲ. ನನ್ನ ಆಶಯವೇ ಬೇರೆ. ಬಿಜೆಪಿ ಅಜೆಂಡಾ ಬೇರೆ’ ಎಂದು ಹೇಳಿದ್ದಾರೆ. ವಿವಾದ ಸೃಷ್ಟಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕತ್ತಿ, “ನನ್ನ ಹೇಳಿಕೆ ತಿರುಚಲಾಗಿದೆ. ನಾನು ಬಿಜೆಪಿ ವಿರುದ್ಧ ಮಾತನಾಡಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತ’ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪ್ರತಿನಿಧಿಸುವ ಬಿಜೆಪಿ ಬಗ್ಗೆ ಯಾವುದೇ ರೀತಿಯ ಅವಾಚ್ಯ ಶಬ್ದಗಳನ್ನು ಪ್ರಯೋಗ ಮಾಡಿಲ್ಲ. ಇದು ದೃಶ್ಯ ಮಾಧ್ಯಮಗಳ ಸೃಷ್ಟಿ. ಪಕ್ಷ ಬಿಟ್ಟು ಹೋಗುವಂತೆ ನನ್ನ 
ವಿರೋಧಿಗಳು ಆರು ತಿಂಗಳಿನಿಂದ ಸಂಚು ನಡೆಸಿದ್ದಾರೆ. ಪಕ್ಷ ಹಾಗೂ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ವಿರೋಧಿಗಳು ನಡೆಸುತ್ತಿರುವ ಸಂಚಿಗೆ ನನಗೆ ಬಿಜೆಪಿ ಟಿಕೆಟ್‌ ಸಿಗದೆ ಹೋದರೆ ರಾಜಕೀಯವಾಗಿ ನಿವೃತ್ತನಾಗುತ್ತೇನೆ. ಆದರೆ ಬೇರೆ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್‌ ಕೈ ತಪ್ಪಿದರೆ ನಮ್ಮ ಕುಟುಂಬದ ಸದಸ್ಯರಲ್ಲಿ
ಯಾರಾದರೂ ಒಬ್ಬರು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ’ ಎಂದರು.

ಸಿಎಂ ಭೇಟಿ ಮಾಡಿದ್ದು ನಿಜ: “ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ  ಮಾಡಿದ್ದು ನಿಜ. ಆಗ ಸಿದ್ದರಾಮಯ್ಯ ನನಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು. ಆದರೆ ಅವರ ಆಹ್ವಾನವನ್ನು ನಾನು ತಿರಸ್ಕರಿಸಿದ್ದೇನೆ. ವೀರಶೈವ-ಲಿಂಗಾಯತ ಎರಡೂ ಒಂದೇ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕಾಂಗ್ರೆಸ್‌ ನಡೆಸುತ್ತಿರುವ ಕುತಂತ್ರ ಅದಕ್ಕೆ ತಿರುಗು ಬಾಣವಾಗಲಿದೆ. ಕಾಂಗ್ರೆಸ್‌ ಪಕ್ಷ ಈ ಸಮುದಾಯಗಳನ್ನು ಒಡೆಯುವ ಸಂಚು ರೂಪಿಸಿದೆ’ ಎಂದರು.

ಕತ್ತಿ ಅವರಿಗೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದ್ದು ನಿಜ. ಆ ಸಂದರ್ಭದಲ್ಲಿ ನಾನು ಅಲ್ಲಿಯೇ ಇದ್ದೆ. ಜನವರಿಯವರೆಗೆ ಕಾದು ನೋಡೋಣ ಎಂದು ಉಮೇಶ ಕತ್ತಿ ಹೇಳಿದ್ದರು. ಅವರು ಗೆಲ್ಲುವ ಕುದುರೆಯಾಗಿರುವುದರಿಂದ 
ಸಹಜವಾಗಿಯೇ ನಾವು ಆಹ್ವಾನ ನೀಡಿದ್ದೇವೆ. ಕತ್ತಿ ಅಲ್ಲದೇ ಬಿಜೆಪಿಯ 10 ಜನ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು
ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. 
 ●ಸತೀಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next