ಭೋಪಾಲ್/ಐಜ್ವಾಲ್: ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈ ತಿಂಗಳ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿರುವಂತೆಯೇ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿ ಹೊರಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಸ್ಮತಿ ಇರಾನಿ, ನಿತಿನ್ ಗಡ್ಕರಿ, ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರುಪಾಣಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿ ಸಂಸದೆ ಹೇಮಾಮಾಲಿನಿ ಸೇರಿದಂತೆ 40 ಮಂದಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಗೋವಿಂದಪುರ ಕ್ಷೇತ್ರದ ಹಾಲಿ ಶಾಸಕ ಬಾಬುಲಾಲ್ ಗೌರ್ ಅವರಿಗೆ ಈ ಬಾರಿ ಟಿಕೆಟ್ ನೀಡದೆ ಇರುವ ಸಾಧ್ಯತೆ ಇದೆ. ಅವರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಕಮಲ್‌ನಾಥ್ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಇದರ ಜತೆಗೆ ಬಿಎಸ್‌ಪಿ ಕೂಡ ಸ್ವತಂತ್ರವಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಮತ್ತೂಂದು ತಲೆನೋವಾಗಿ ಪರಿಣಮಿಸಿದೆ.
ಆರೋಪ ತನಿಖೆಗೆ ಸಮಿತಿ: ಮಿಜೋರಾಂನಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಸ್.ಬಿ.ಶಶಾಂಕ್ ವಿರುದ್ಧದ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಸಮಿತಿ ರಚಿಸಿದೆ. ಇದಕ್ಕೂ ಮುನ್ನ ಪ್ರತಿಭಟನೆಯಿಂದಾಗಿ ಮುಖ್ಯಮಂತ್ರಿ ಲಾಲ್ತನ್ ಹಾವ್ಲಾ ತಮ್ಮ ಸ್ವಕ್ಷೇತ್ರ ಸರ್ಚಿಪ್‌ನಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಪೋದ್ರಿಕ್ತ ಜನರು ತುಂಬಿದ್ದರಿಂದ ಸಿಎಂಗೆ ಅಲ್ಲಿಗೆ ಆಗಮಿಸಲೂ ಅಸಾಧ್ಯವಾಗಿದೆ. “ಬ್ರೂ’ ಮತದಾರರ ಪಟ್ಟಿಗೆ ಮುಖ್ಯ ಚುನಾವಣಾ ಅಧಿಕಾರಿ ಪೂರ್ವಗ್ರಹ ಪೀಡಿತರಾಗಿದ್ದರು ಎನ್ನುವುದು ಅವರ ಬದಲಾವಣೆಗೆ ಸಾರ್ವಜನಿಕರು ಆಗ್ರಹಿಸಲು ಕಾರಣ.
ನಾಲ್ಕನೇ ಪಟ್ಟಿ ಬಿಡುಗಡೆ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಬುಧವಾರ ರಾತ್ರಿ 29 ಮಂದಿ ಹುರಿಯಾಳುಗಳಿರುವ ನಾಲ್ಕನೇ ಪಟ್ಟಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಇದುವರೆಗೆ ಒಟ್ಟು 213 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದಂತಾಗಿದೆ.