Advertisement

ಬಿಜೆಪಿ ಮುಖಂಡರ ಆರೋಪದಲ್ಲಿ ಹುರುಳಿಲ್ಲ: ಡಿಸಿಸಿ ಉಪಾಧ್ಯಕ್ಷ

09:44 PM Jul 23, 2020 | Hari Prasad |

ಚಾಮರಾಜನಗರ: ಶಾಸಕ ಹಾಗೂ ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರ ವಿರುದ್ದ ಬಿಜೆಪಿ ಮುಖಂಡ ನಿಜಗುಣರಾಜು, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

Advertisement

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಒಂದು ವರ್ಷದ ಅವಧಿಯಲ್ಲಿ 106 ಕೋಟಿ ರೂ.ಗಳ ಅನುದಾನದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್ ಅವರು ಜಿಲ್ಲೆಗೆ 34 ಬಾರಿ ಭೇಟಿ ನೀಡಿದರೂ ಕೂಡ ಯಾವುದೇ ಅನುದಾನವನ್ನು ಜಿಲ್ಲೆಗೆ ತಂದಿಲ್ಲ. ಜಿಲ್ಲೆಗೆ ಸುರೇಶ್‌ಕುಮಾರ್ ಕೊಡುಗೆಯನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಗುಣರಾಜು ಅವರು ತಮ್ಮ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನ್ಯಾಯಾಲಯದ ರಸ್ತೆ ಅಭಿವೃದ್ದಿ ಕಾಮಗಾರಿಗೆ ತಡೆ ಒಡ್ಡಿದ್ದಾರೆ. ಇದನ್ನು ಮರೆಮಾಚಲು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪಟ್ಟಣದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ.

ಇದು ಬಿಜೆಪಿ ವರಿಷ್ಠರನ್ನು ಮೆಚ್ಚಿಸುವ ಕೆಲಸವಾಗಿದೆ ಎಂದ ಅವರು, ಎಸಿಬಿ ಹಣ ವಶ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಸಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮುಖಂಡ ಸಿ.ಕೆ.ರವಿಕುಮಾರ್ ಮಾತನಾಡಿ, ನಗರಸಭಾ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಅವರು ಸರ್ಕಾರಿ ಜಾಗದಲ್ಲಿ  ಕಟ್ಟಡ ಕಟ್ಟುವುದೇ ಸಾಧನೆ ಎಂದಿರುವ ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸಾಕ್ಷಿ ಆಧಾರಗಳನ್ನು ಸಾಬೀತುಪಡಿಸಲಿ.

Advertisement

ಇವರು ಚುಡಾ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಖಾಸಗಿಯವರ ಲೇಔಟ್ ಮಾಡಿ 7 ನಿವೇಶನ ಮಾಡಿದ್ದಾರೆ ಅಲ್ಲದೆ ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಂಜುಂಡಸ್ವಾಮಿ ವಿರುದ್ದ ಸುಳ್ಳು ಆರೋಪ ಮಾಡಿರುವ ಬಾಲಸುಬ್ರಹ್ಮಣ್ಯ ಅವರ ವಿರುದ್ದ ಮಾನನಷ್ಠ ಮೊಕದ್ದಮೆ ಹೂಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ ಅಸ್ಗರ್ ಮಾತನಾಡಿ, ಶೋಭಾ ಕರಂದ್ಲಾಜೆ ಅವರು ಸಚಿವೆಯಾಗಿದ್ದ ಸಂದರ್ಭದಲ್ಲಿ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಅದ್ದೂರಿ ಪೂಜೆ ನಡೆಸಿ, ಉದ್ಯಾನವನದಲ್ಲಿ ಪುಷ್ಕರಣಿ ಇದೆ ಅದನ್ನು ಅಭಿವೃದ್ದಿ ಪಡಿಸುತ್ತೇವೆ ಹಾಗೂ ಚಾಮರಾಜೇಶ್ವರ ದೇವಾಲಯ ಅಭಿವೃಧ್ದಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರೇ ಹೊರತು ನಯಾಪೈಸೆಯನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಿಲ್ಲ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅರಕಲವಾಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಒಂದು ವರ್ಷ ಆಗಿದೆ ಬಾಕಿ ಉಳಿದಿರುವ 7 ಕೋಟಿ ರೂ. ಬಿಡುಗಡೆ ಮಾಡಿಲ್ಲ ಎಂದು ಆಪಾದಿಸಿದರು. ತಾ.ಪಂ.ಸದಸ್ಯ ಮಹದೇವಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next