ಸಾಗರ: ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸ್ವೀಕಾರ ಕೇಂದ್ರದಲ್ಲಿ ಮಹಿಳೆಯರಿಗೆ ಕಿರುಕುಳ ಹಾಗೂ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ನಗರ ಹಾಗೂ ಗ್ರಾಮಾಂತರ ಬಿಜೆಪಿ ಮಹಿಳಾ ಘಟಕದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ನಿಮ್ಹಾನ್ಸ್ ಸ್ವೀಕಾರ ಕೇಂದ್ರ ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಈ ಕೇಂದ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿದೆ. ಈಚೆಗೆ ಸ್ವೀಕಾರ ಕೇಂದ್ರದಲ್ಲಿದ್ದ ಅನೇಕ ಮಹಿಳೆಯರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಬಹಳಷ್ಟು ಮಹಿಳೆಯರ ಮೇಲೆ ಇಲಾಖೆಯ ಕೆಲವರು ದುರುಳರು ಅತ್ಯಾಚಾರ ನಡೆಸಿದ್ದಾರೆ ಎಂದು ದೂರಲಾಗಿದೆ.
ಇಲ್ಲಿನ ಸ್ವೀಕಾರ ಕೇಂದ್ರಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಆಶ್ರಯ ಬಯಸಿ ಬಂದವರಿದ್ದಾರೆ. ಇಂತಹ ಹೆಣ್ಣುಮಕ್ಕಳನ್ನು ರಹಸ್ಯವಾಗಿ ವೇಶ್ಯವಾಟಿಕೆಗಳಿಗೆ ಸಾಗಾಟ ಮಾಡಲಾಗಿದೆ. ಇನ್ನು ಕೆಲವರು ಇಲ್ಲಿನ ಅನೈತಿಕ ವ್ಯವಹಾರಗಳನ್ನು ನೋಡಿ ಸಹಿಸಲಾಗದೆ ಮನೆಗೆ ವಾಪಸಾಗಿದ್ದಾರೆ. ಉಳಿದ ಕೆಲವರು ಎಲ್ಲಿದ್ದಾರೆನ್ನುವುದಕ್ಕೆ ದಾಖಲೆ ಸಹ ಸಿಗುತ್ತಿಲ್ಲ ಎಂದು ತಿಳಿಸಲಾಯಿತು.
ಸ್ವೀಕಾರ ಕೇಂದ್ರದಲ್ಲಿರುವ ಮಹಿಳೆಯರನ್ನು ಅಲ್ಲಿನ ಸಿಬ್ಬಂದಿಗಳೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳಿವೆ. ಈ ಅವಾಂತರಗಳಿಗೆ ಸ್ವೀಕಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವವರೇ ಕಾರಣರಾಗಿದ್ದಾರೆ ಎನ್ನುವ ಆರೋಪವಿದೆ ಎಂದು ಹೇಳಲಾಗಿದೆ. ಬೆಂಗಳೂರು ನಿಮ್ಹಾನ್ಸ್ ಕೇಂದ್ರದ ಅವ್ಯವಸ್ಥೆ ಬಗ್ಗೆ ಸೂಕ್ತ ತನಿಖೆ ನಡೆಸುವ ಜೊತೆಗೆ ತಪ್ಪಿತಸ್ಥ ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಯಶೋದಮ್ಮ, ಸುಮಾ ರವಿ, ಅನುಪಮ, ಲಲಿತಾ ಅನಿಲ್, ವೀಣಾ ನಾಯ್ಡು, ಲೀಲಾವತಿ, ಕಸ್ತೂರಿ ನಾಗರಾಜ್, ನಗರಸಭಾ ಸದಸ್ಯೆ ನಾಗರತ್ನ ಇನ್ನಿತರರು ಇದ್ದರು.