Advertisement

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ರಾಮುಲು

06:30 AM May 05, 2019 | Team Udayavani |

ಬಳ್ಳಾರಿ: “ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಪಕ್ಷ ಕೈಗೊಳ್ಳುವ ನಿರ್ಣಯ, ನೀಡುವ ಜವಾಬ್ದಾರಿ ಆಧರಿಸಿ ಕೆಲಸ ಮಾಡುವೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿ.ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ರಾಮುಲು ಸಹ ರೇಸ್‌ನಲ್ಲಿದ್ದಾರೆಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಸಿ.ಟಿ.ರವಿ ಅವರು ಹೇಳಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿತ್ತು.

ಆದರೆ, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರಿಂದ ಯಾವುದೇ ನಿರ್ಣಯಗಳನ್ನು ನಾವು ಸ್ವಂತವಾಗಿ ಕೈಗೊಳ್ಳಲಾಗದು. ನಾನು ಒಬ್ಬ ಕಾರ್ಯಕರ್ತನಾಗಿದ್ದು, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ. ಪಕ್ಷದ ನಿರ್ಣಯ, ವರಿಷ್ಠರ ಮಾರ್ಗದರ್ಶನದ ಆಧಾರದಲ್ಲಿ ಕೆಲಸ ಮಾಡುವೆ’ ಎಂದು ಸ್ಪಷ್ಟಪಡಿಸಿದರು.

ಇಂದಿನಿಂದ ಪ್ರಚಾರ: “ಉಪ ಚುನಾವಣೆ ನಡೆಯುತ್ತಿರುವ ಧಾರವಾಡ ಜಿಲ್ಲೆ ಕುಂದಗೋಳ, ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ನಾನು ಭಾನುವಾರದಿಂದ ಪ್ರಚಾರ ಕೈಗೊಳ್ಳಲಿದ್ದೇವೆ.

ರಾಜ್ಯದ ಜನ ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ರಾಜ್ಯದ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲ್ಲಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ’ ಎಂದರು.

Advertisement

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 2.43 ಲಕ್ಷ ಮತಗಳಿಂದ ಸೋತಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಉತ್ತಮ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಸರಕಾರಕ್ಕೆ ಕಂಟಕ: ಲೋಕಸಭೆ ಚುನಾವಣೆ ಫಲಿತಾಂಶ, ಉಪ ಚುನಾವಣೆಗಳು ಮುಗಿಯುವುದರೊಳಗಾಗಿ ಮೈತ್ರಿ ಸರ್ಕಾರ ಅಪಾಯದ ಅಂಚಿಗೆ ಸಿಲುಕಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಆರಂಭವಾಗುವುದರೊಳಗಾಗಿ ಮೈತ್ರಿ ಸರ್ಕಾರಕ್ಕೆ ಕಂಟಕ ಎದುರಾಗಲಿದೆ.

ಕಾಂಗ್ರೆಸ್‌-ಜೆಡಿಎಸ್‌ ಪಕ್ಷದವರು ಪರಸ್ಪರ ಕಲ್ಲೆಸೆದುಕೊಳ್ಳುವುದನ್ನು ನೋಡಿದರೆ ಮೈತ್ರಿ ಸರ್ಕಾರ ಬಹುಕಾಲ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಚುನಾವಣೆ ಮುಗಿದ ನಂತರ ಮೈತ್ರಿ ಸರ್ಕಾರಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ ಎಂದರು.

ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿಯವರ ಹೇಳಿಕೆಗಳನ್ನು ಮೊದಲಿಂದಲೂ ನಾನು ಗಮನಿಸುತ್ತಿದ್ದೇನೆ. ಮೊದಲಿಂದಲೂ ಬಹಳಷ್ಟು ಶಾಸಕರು ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

ಅವರು ಬಂಡಾಯವೆದ್ದ ನಂತರ ಅನೇಕ ಕಡೆ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಮೇ 23ರಂದು ಫಲಿತಾಂಶ ಹೊರ ಬಂದ ಬಳಿಕ ಬಹಳಷ್ಟು ದೊಡ್ಡ ಬದಲಾವಣೆಗಳು ಆಗಲಿವೆ. ಹಾಲಿಗಳೆಲ್ಲ ಮಾಜಿಗಳಾಗಿ, ಮಾಜಿಗಳೆಲ್ಲ ಹಾಲಿಗಳಾಗುವ ವಾತಾವರಣ ನಿರ್ಮಾಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next