ಪಾಟ್ನಾ: ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿರುವುದನ್ನು ಕಂಡು ಭಯಗೊಂಡಿರುವ ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆಗೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಹೀಗೆಂದು ಜೆಡಿಯು ಮುಖಂಡ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಪಾಟ್ನಾದಲ್ಲಿ ಮಾತನಾಡಿದ ಅವರು “ಸಾಮಾನ್ಯವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಚಟುವಟಿಕೆಗಳನ್ನು ಗಮನಿಸುತ್ತವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಮಹಾಮೈತ್ರಿ ಕೂಟ ರಚಿಸುತ್ತಿರುವ ನಮ್ಮ ಪ್ರಯತ್ನದ ಹಿನ್ನೆಲೆಯಲ್ಲಿ ಸರ್ಕಾರವನ್ನು ಅವಧಿಗೆ ಮುನ್ನವೇ ವಿರ್ಸಜಿಸಿ, ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಿದೆ,’ ಎಂದು ಹೇಳಿದ್ದಾರೆ. ಜೂ.23ರಂದು ಪಾಟ್ನಾದಲ್ಲಿ ಪ್ರತಿಪಕ್ಷಗಳು ಸಭೆಯನ್ನು ಹಮ್ಮಿಕೊಂಡಿರುವಂತೆಯೇ ನಿತೀಶ್ ಈ ಮಾತುಗಳನ್ನಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಈ ಮಾತುಗಳನ್ನಾಡಿದ್ದರು.
ಬೇಹುಗಾರಿಕೆ:
“ಹಿಂದೂಸ್ಥಾನಿ ಅವಾಮ್ ಮೋರ್ಚ(ಎಚ್‌ಎಎಂ) ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಮಹಾಮೈತ್ರಿ ಕೂಟ ತ್ಯಜಿಸಿದ್ದು ಒಳ್ಳೆಯದೇ ಆಯಿತು. ಅವರು ಬಿಜೆಪಿ ಪರವಾಗಿ ಪ್ರತಿಪಕ್ಷಗಳ ಮೇಲೆ ವರ್ಚುಯಲ್ ಆಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ದೂರಿದರು. ಇದೇ ವೇಳೆ, ಎಚ್‌ಎಎಂ ನಾಯಕ ಮತ್ತು ಮಾಜಿ ಸಚಿವ ಸಂತೋಷ್ ಕುಮಾರ್ ಸುಮನ್ ಅವರ ರಾಜೀನಾಮೆಯಿಂದ ಸಚಿವ ಸ್ಥಾನವೊಂದು ತೆರವಾಗಿತ್ತು. ಸೋನರ್ಸಾ ಕ್ಷೇತ್ರದ ಶಾಸಕ ರತ್ನೆಶ್ ಅವರು ಸಚಿವರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.