ಮೈಸೂರು: ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ. ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.
ಬಿಜೆಪಿ ಸಮಾವೇಶದಲ್ಲಿ ವಾಗ್ದಾಳಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಮೇಜ್ ಡೌನ್ ಮಾಡುವುದು ಅವರ ಉದ್ದೇಶ, ಇದು ಆರ್ ಎಸ್ಎಸ್ ಕಾರ್ಯತಂತ್ರ. ಆರ್ ಎಸ್ಎಸ್ ಬರೆದುಕೊಟ್ಟಂತೆ ಈ ಗಿರಾಕಿಗಳು ಭಾಷಣ ಮಾಡುತ್ತಾರೆ. ಸಾಮಾಜಿಕ ನ್ಯಾಯದ ಪರ ಅವರು ಯಾವತ್ತಿದ್ದರು ಎಂದರು.
ನಳಿನ್ ಕಟೀಲು ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ಆತ ಆರ್ ಎಸ್ಎಸ್ ಹಿನ್ನೆಲೆಯವನು. ಆರ್ ಎಸ್ಎಸ್ ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಸುಳ್ಳನ್ನೇ ಉತ್ಪಾದನೆ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಸರ್ದಾರ್ ಪಟೇಲ್ ಭಾರತದ ಮೊದಲ ಪ್ರಧಾನಿಯಾಗಿದ್ದರೆ…: ಅಮಿತ್ ಶಾ
ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿಯವರಷ್ಟು ಲಜ್ಜೆಗೆಟ್ಟವರು, ಭಂಡರು ಯಾರು ಇಲ್ಲ. ಏನೇ ಮಾಡಿದರು ಭಂಡತನದಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ. 40% ಕಮಿಷನ್ ಹಣದಲ್ಲಿ ಪತ್ರಕರ್ತರಿಗೆ ಗಿಫ್ಟ್ ಹಂಚಿದ್ದಾರೆ. ಸಿಎಂ ನನಗೆ ಗೊತ್ತಿಲ್ಲ ಅಂದರೆ ನಂಬಲು ಸಾಧ್ಯನಾ? ನಮ್ಮ ಮೇಲಿನ ಆರೋಪ ಬರೆಯಬೇಡಿ ಎಂದು ಗಿಫ್ಟ್ ಕೊಟ್ಟಿದ್ದಾರೆ. ಪಾಪ ಕೆಲವರು ಪತ್ರ ಬರೆದು ವಾಪಸ್ಸು ಕೊಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಿದರು.
ಮುಂದಿನ ವಿಧಾನಸಭೆಗೆ ಕೈ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನವೆಂಬರ್ ಅಂತ್ಯದಲ್ಲಿ ಸಿದ್ದವಾಗಲಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದ ಎಂದರು.