ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಇದರಿಂದ ಅವರು ಇಲ್ಲ ಸಲ್ಲದ ಆರೋಪಗಳಿಗೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಗಮನದಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಲಿದ್ದು, ಸ್ಫೂರ್ತಿ ದೊರೆಯಲಿದೆ.
ಈ ಹಿಂದೆ ಹಳೇ ಮೈಸೂರು ಭಾಗಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು, ಇದೀಗ ಕಿತ್ತೂರು ಕರ್ನಾಟಕಕ್ಕೆ ಆಗಮಿಸಿದ್ದು ಮುಂದಿನ ತಿಂಗಳು ಕಲ್ಯಾಣ ಕರ್ನಾಟಕಕ್ಕೆ ಹೋಗಲಿದ್ದಾರೆ ಎಂದರು.
ರಾಜ್ಯ ಸರಕಾರದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುತ್ತಿದ್ದು, ರಾಷ್ಟ್ರೀಯ ನಾಯಕರು ಬಂದಾಗ ಜನರ ಮೇಲೆ ಪ್ರಭಾವ ಬೀರುವ ಕಾರ್ಯ ಆಗಲಿದೆ ಎಂದರು.
ಇದನ್ನೂ ಓದಿ:ಲಡಾಖ್ ನಲ್ಲಿ ಚೀನಾದ ಸೈನಿಕರೊಂದಿಗೆ ಹೆಚ್ಚಿನ ಘರ್ಷಣೆ ನಡೆಯಬಹುದು: ವರದಿ
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ, ಹಳೇ ಮೈಸೂರು ಭಾಗಗಳಿಗೆ ನಮ್ಮದೇಯಾದ ಪ್ರತ್ಯೇಕ ಗುರಿಗಳಿವೆ ಎಂದರು.
ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಲ್ಲಿನ ನವನಗರ ಬಳಿ ಇರುವ ತಂದೆ-ತಾಯಿ ಸಮಾಧಿಗಳಿಗೆ ನಮನ ಸಲ್ಲಿಸಿದರು.