Advertisement

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

05:08 PM Apr 30, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿಯಾಗಿದೆ. ಪ್ರಧಾನಿ ಮೋದಿ, ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದರು.

Advertisement

ಕುಷ್ಟಗಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 10 ವರ್ಷ ದೇಶದಲ್ಲಿ ಆಡಳಿತ ಮಾಡಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಹಿಂದೆ ಯಡಿಯೂರಪ್ಪ ಸರ್ಕಾರ, ಬೊಮ್ಮಾಯಿ ಸರ್ಕಾರವೂ ಏನೂ ಮಾಡಲಿಲ್ಲ. 15 ಲಕ್ಷ ಹಣವನ್ನು ಜನರ ಖಾತೆಗೆ ಹಾಕುವೆವು ಎಂದರು ಹಣ ಬಂತಾ? ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು.

ಕೊಟ್ಟಿದ್ದಾರಾ? ಅಚ್ಛೇ ದಿನ್‌ ಬಂತಾ? ರೈತರ ಆದಾಯ ದುಪ್ಪಟ್ಟು ಆಯಿತಾ? ಎಂದರಲ್ಲದೇ, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿ ಖಜಾನೆ ಖಾಲಿಯಾಗುತ್ತದೆ. ಸರ್ಕಾರ ದಿವಾಳಿಯಾಗುತ್ತದೆ ಎಂದು ಸುಳ್ಳು ಹೇಳಿದರು. ಈಗ ಮತ್ತೂಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಮೀಸಲಾತಿ ವಿರೋಧಿ ಎಂದೆನ್ನುತ್ತಿದ್ದಾರೆ. ಕಾಂಗ್ರೆಸ್‌ ಯಾವಾಗಲೂ ಮೀಸಲಾತಿ ಪರವಿದೆ. ನಾವು ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎಂದರಲ್ಲದೇ, ಮಂಡಲ್‌ ಕಮಿಷನ್‌ ವರದಿ, ಹಿಂದುಳಿದ, ದಲಿತರಿಗೆ, ಮಹಿಳೆಯರಿಗೆ, ಸ್ಥಳೀಯ ಚುನಾವಣೆಯಲ್ಲಿ ಮೀಸಲಾತಿ ಕೊಟ್ಟಾಗ ಬಿಜೆಪಿಗರು ವಿರೋಧ ಮಾಡಿದ್ದರು. ಈಗ ನಾವು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಇವರದ್ದು ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ ಎಂದು ಗುಡುಗಿದರು. ಈ ಲೋಕಸಭಾ ಚುನಾವಣೆ ಸತ್ಯ-ಸುಳ್ಳಿನ ಚುನಾವಣೆಯಾಗಿದೆ.

ನಾವು ಸತ್ಯವನ್ನು ಹೇಳುತ್ತಿದ್ದೇವೆ. ಕೇಂದ್ರ ಸರ್ಕಾರ ಬಡವರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಏನೂ ಮಾಡಲಿಲ್ಲ. ಪ್ರಧಾನಿ ಮೋದಿ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಅದರ ಧೇಯೋದ್ದೇಶ ನೆರವೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದರು. ನಾವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್‌ಗಳನ್ನು ಕೊಟ್ಟೆವು. ಅದರಂತೆ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ ಅರಸಿಕೆರೆ ಮಹಿಳೆ ನನಗೆ ಟಿಕೆಟ್‌ ಹಾರವನ್ನೇ ಹಾಕಿದಳು. ಆ ಉಪಕಾರ ಸ್ಮರಣೆ, ಇದಕ್ಕಿಂತ ಋಷಿ ಕೊಡುವುದು ಮತ್ತೂಂದಿಲ್ಲ ಎಂದರು.

ಅನ್ನಭಾಗ್ಯ ಯೋಜನೆಯಡಿ ಪ್ರಧಾನಿ ಅವರು ಅಕ್ಕಿ ಕೊಡಿ ಎಂದು ಕೇಳಿದರೂ ಕೊಡಲಿಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪರ ಬಡವರು ನಿಲ್ಲುತ್ತಾರೆ ಎನ್ನುವ ಕಾರಣಕ್ಕೆ ಅಕ್ಕಿ ಕೊಡಲಿಲ್ಲ. ನಾವು ಅಕ್ಕಿ ಬದಲಿಗೆ ಜನರಿಗೆ ಪ್ರತಿ ತಿಂಗಳು 170 ರೂ. ನಂತೆ 1.50 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಹಣ ಪಾವತಿ ಮಾಡುತ್ತಿದ್ದೇವೆ. ಗೃಹ ಜ್ಯೋತಿ ಉಚಿತ ಕೊಡುತ್ತಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಡಿ 1.20 ಕೋಟಿ ಕುಟುಂಬದ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ಖಾತೆಗೆ ಜಮೆ ಮಾಡುತ್ತಿದ್ದೇವೆ. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಬಿಜೆಪಿ ಮತ್ತೆ ಸುಳ್ಳು ಹೇಳುತ್ತಿದೆ. ನಾಲ್ಕು ವರ್ಷದಲ್ಲಿ ಐದು ಗ್ಯಾರಂಟಿ ಒಂದು ತಿಂಗಳೂ ನಿಲ್ಲಿಸುವುದಿಲ್ಲ. ಬಿಜೆಪಿ ಜನರ ಮುಂದೆ ಸತ್ಯ ಹೇಳಲಿ.

Advertisement

ಮೋದಿ ಅವರು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ದೇವರಾಜ ಅರಸು ನಂತರ 5 ವರ್ಷ ಸಿಎಂ ಆಗಿದ್ದವನು ನಾನು ಮಾತ್ರ. ಎಐಸಿಸಿ ಐದು ಗ್ಯಾರಂಟಿ ಕಾರ್ಡ್‌ಗೆ ಖರ್ಗೆ ಹಾಗೂ ರಾಹುಲ್‌ ಗಾಂಧಿ  ಸಹಿ ಮಾಡಿ ಕಾರ್ಡ್‌ ವಿತರಿಸುತ್ತಿದ್ದಾರೆ. ಪ್ರಧಾನಿ ಮೋದಿ ಪ್ರವಾಹ ಬಂದಾಗ, ಬರ ಬಂದಾಗ ಬರಲಿಲ್ಲ, ಚುನಾವಣೆ ಬಂದಾಗ ಬಂದಿದ್ದಾರೆ. ಈಗ ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಜನತೆ ಸುಳ್ಳನ್ನು ನಂಬದೆ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ, ಬೈರತಿ ಸುರೇಶ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ, ಬಸನಗೌಡ ತುರ್ವಿಹಾಳ, ಎಂಎಲ್‌ಸಿ ವಿ.ಆರ್‌. ಸುದರ್ಶನ, ಮಾಜಿ ಶಾಸಕರಾದ ಅಮರೇಗೌಡ ಬಯ್ನಾಪುರ, ವೆಂಕಟರಾಮಯ್ಯ, ಬಸನಗೌಡ ಸಿಂಧನೂರು, ಮಾಲತಿ ನಾಯಕ್‌, ಅಮರೇಶ ಕರಡಿ, ಹಸನಸಾಬ ದೋಟಿಹಾಳ, ಶರಣೇಗೌಡ ಬಯ್ನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next