ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಪಾದಯಾತ್ರೆಯಲ್ಲಿ ವಿಷಯವೂ ಇಲ್ಲ, ಅರ್ಥವೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್ ಪಕ್ಷದವರನ್ನು ಹೆದರಿಸಿ ಬೆದರಿಸಿ ಪಾದಯಾತ್ರೆಗೆ ಒಪ್ಪಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಾಂದೋಲನ ಯಾತ್ರೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯ ಪಾದಯಾತ್ರೆಗೆ ಅರ್ಥ ಅಥವಾ ವಿಷಯ ಯಾವುದೂ ಇಲ್ಲ. ಅವರ ಪಾದಯಾತ್ರೆ ವಿಚಾರ ಏನು? ಅವರು ಮಾಡಿರುವ ಹಗರಣಗಳನ್ನು ಬಯಲು ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ನಮ್ಮ ಸರಕಾರದ ಅವಧಿಯಲ್ಲಿ ಯಾವುದಾದರೂ ಹೊಸ ಹಗರಣಗಳಿದ್ದರೆ ಅವರು ಹೇಳಲಿ. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದರೆ ಅದು ಬಿಜೆಪಿ ಸರಕಾರ. ಹೀಗಾಗಿ ನಾವು ಅವರ ಕಾಲದ ಹಗರಣಗಳ ಬಗ್ಗೆ, ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರತಿನಿತ್ಯ ಮೂರ್ನಾಲ್ಕು ಪ್ರಶ್ನೆ ಕೇಳುತ್ತೇವೆ, ಅವರು ಉತ್ತರ ನೀಡಲಿ ಎಂದು ಸವಾಲೆಸೆದರು.
ಪಾದಯಾತ್ರೆ ಮೂಲಕ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತದೆ. ಅವರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರನ್ನು ಹೆದರಿಸಿ, ಬೆದರಿಸಿ ಪಾದಯಾತ್ರೆಗೆ ಒಪ್ಪಿಸಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅದು ಅವರವರ ವಿಚಾರ. ಅವರ ಒಪ್ಪಿಗೆಯ ಗುಟ್ಟು ಏನು ಎಂದು ಅವರನ್ನೇ ಕೇಳಿ ಎಂದು ಹೇಳಿದರು.
ಸಿಬಿಐ ಏನೇನು ಮಾಡುತ್ತಿದೆ
ತನಿಖೆ ಹೆಸರಲ್ಲಿ ಅಧಿಕಾರಿಗಳಿಗೆ ಒತ್ತಡ ಹಾಕಿ ಮುಖ್ಯಮಂತ್ರಿ, ನನ್ನ ಹೆಸರು ಹೇಳುವಂತೆ ಬೆದರಿಸುವುದು ನಡೆಯುತ್ತಿದೆ. ಸಿಬಿಐ ಏನೇನು ಮಾಡುತ್ತಿದೆ ಎಂಬ ಪಟ್ಟಿ ನನ್ನ ಬಳಿ ಇದೆ. ನಿಧಾನವಾಗಿ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.