Advertisement

ಚಾ.ನಗರ ಜಿಲ್ಲೆಯಲ್ಲಿ ನೆಲೆ ಕಳೆದುಕೊಂಡ ಕಮಲ

03:32 PM May 16, 2023 | Team Udayavani |

ಚಾಮರಾಜನಗರ: ಕಳೆದ 2018ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಂದು ಸ್ಥಾನ ಪಡೆಯುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಈ ಬಾರಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಗೆದ್ದು ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಮಾಡಲಿದೆ ಮುಖಂಡರು ಹೇಳುತ್ತಿದ್ದರು. ಆದರೆ ಇದ್ದ ಒಂದು ಸ್ಥಾನವನ್ನೂ ಕಳೆದುಕೊಳ್ಳುವ ಮೂಲಕ ಶೂನ್ಯ ಸಂಪಾದನೆ ಮಾಡಿದೆ.

Advertisement

1999ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಗುರುಸ್ವಾಮಿ ಅವರು ವಾಟಾಳ್‌ ನಾಗರಾಜ್‌ ಅವರನ್ನು ಮಣಿಸುವ ಮೂಲಕ ಕ್ಷೇತ್ರದಲ್ಲಿ ಮಾತ್ರವಲ್ಲ, ಜಿಲ್ಲೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯಿತು. 2009ರಲ್ಲಿ ನಡೆದ ಕೊಳ್ಳೇಗಾಲ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎನ್‌.ನಂಜುಂಡ ಸ್ವಾಮಿ ಜಯಗಳಿಸಿ ಶಾಸಕರಾಗಿದ್ದರು. ಅದಾದ ಬಳಿಕ 2018ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸಿ.ಎಸ್‌.ನಿರಂಜನಕುಮಾರ್‌ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಬಿಎಸ್‌ ಪಿಯಿಂದ ಗೆದ್ದಿದ್ದ ಎನ್‌. ಮಹೇಶ್‌ ಪಕ್ಷದಿಂದ ಉಚ್ಚಾಟಿತರಾಗಿ, ಬಳಿಕ ಬಿಜೆಪಿ ಸೇರಿದ್ದರು.

2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳಲ್ಲಿ ಕಾಂಗ್ರೆಸ್‌ ಶಾಸಕರು ಆರಿಸಿ ಬಂದಿದ್ದರು. ಲೋಕಸಭೆ ಸದಸ್ಯರೂ ಕಾಂಗ್ರೆಸ್‌ನವರೇ ಆಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್‌ ಕಳೆದುಕೊಂಡಿತು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲೂ ಸೋತಿತು. ಈ ಬೆಳವಣಿಗೆಗಳಿಂದಾಗಿ ಜಿಲ್ಲೆಯಲ್ಲಿ ಅದರ ಬೇರುಗಳು ಸಡಿಲವಾಗುತ್ತಿವೆ. ಅದರ ಬುಡ ಅಲುಗಾಡುತ್ತಿದೆ ಎಂಬ ಮುನ್ಸೂಚನೆ ದೊರಕಿತ್ತು.

ಬಿಜೆಪಿ ನಿರೀಕ್ಷೆ ನುಚ್ಚು ನೂರು: ದೇಶಾದ್ಯಂತ ನರೇಂದ್ರಮೋದಿ ಅಲೆಯಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂಬ ಪ್ರಬಲ ಆಕಾಂಕ್ಷೆ ಬಿಜೆಪಿಯಲ್ಲಿತ್ತು. ಆದರೆ ಚುನಾವಣಾ ಫ‌ಲಿತಾಂಶ ಬಿಜೆಪಿಯ ನಿರೀಕ್ಷೆಯನ್ನು ನುಚ್ಚು ನೂರು ಮಾಡಿದೆ. ನಾಲ್ಕು ಸ್ಥಾನಗಳಿರಲಿ, ಇದ್ದ ಒಂದು ಸ್ಥಾನವನ್ನೂ ಬಿಜೆಪಿ ಕಳೆದುಕೊಂಡಿದೆ. ಇದಕ್ಕೆ ರಾಜ್ಯಾದ್ಯಂತ ಎದ್ದ ಆಡಳಿತ ವಿರೋಧಿ ಅಲೆ, ಬೆಲೆಯೇರಿಕೆ, ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗಳು ಇತ್ಯಾದಿ ಕಾರಣಗಳನ್ನು ಇಲ್ಲಿನ ಮುಖಂಡರು ಕೊಟ್ಟುಕೊಂಡರೂ, ಸ್ಥಳೀಯವಾಗಿ ಅನೇಕ ಅಂಶಗಳು ಬಿಜೆಪಿ ಸೋಲಿಗೆ ಕಾರಣವಾದವು.

ಚಾಮರಾಜನಗರ ಕ್ಷೇತ್ರ: ಸಚಿವ ವಿ. ಸೋಮಣ್ಣ ಅವರ ಸ್ಪರ್ಧೆಯಿಂದಾಗಿ ಈ ಬಾರಿ ಚಾ.ನಗರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಆ ಪಕ್ಷದ ಮುಖಂಡರು ನಂಬಿದ್ದರು. ಕಳೆದ ಬಾರಿ ಕೆ.ಆರ್‌. ಮಲ್ಲಿಕಾರ್ಜುನಪ್ಪ ಅವರು 4,913 ಮತಗಳಿಂದ ಸೋತಿದ್ದರು. ಈ ಬಾರಿ ಈ ಅಂತರವನ್ನು ಸೋಮಣ್ಣ ದಾಟಿ ಗೆಲ್ಲುವುದು ಕಷ್ಟವೇನಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು.

Advertisement

ಕ್ಷೇತ್ರದಲ್ಲಿ ಲಿಂಗಾಯತ ಮತ್ತು ನಾಯಕ ಸಮುದಾಯದ ಮತಗಳು ಮಾತ್ರ ಬಿಜೆಪಿಯ ಇಡುಗಂಟು. ದಲಿತ ಮತಗಳನ್ನು ಬಿಎಸ್‌ಪಿ ಅಭ್ಯರ್ಥಿ 15 ಸಾವಿರದಷ್ಟಾದರೂ ಸೆಳೆಯುತ್ತಾರೆ. ನಾವು 10 ಸಾವಿರ ದಲಿತ ಮತಗಳನ್ನು ಪಡೆದರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಯದಾಗಿತ್ತು. ಆದರೆ ಬಿಎಸ್‌ಪಿಗೆ 6 ಸಾವಿರದಷ್ಟು ಮತಗಳು ಬಂದವು. ದಲಿತರ ಮತಗಳು ಬಿಜೆಪಿ ನಿರೀಕ್ಷಿಸಿದಷ್ಟು ಬುಟ್ಟಿಗೆ ಬೀಳಲಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕೀಯಕ್ಕೆ ಬಂದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಅವರಿಗೆ ಕ್ಷೇತ್ರದ ಒಳಹೊರಗು ಚೆನ್ನಾಗಿ ಗೊತ್ತು. ಜಾತಿ ಲೆಕ್ಕಾಚಾರಗಳು ಕರತಲಾಮಲಕ. ಹೀಗಾಗಿ ಬಿಜೆಪಿ ಕ್ಷೇತ್ರದಲ್ಲಿ ಸೋತಿತು.

ಕೊಳ್ಳೇಗಾಲ ಕ್ಷೇತ್ರ: ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಬಿಜೆಪಿಗೆ ಹೋದ ಬಳಿಕ ಎನ್‌. ಮಹೇಶ್‌ ಅವರನ್ನು ಬೆಂಬಲಿಸಿ ಕೊಂಡು ಬಂದಿದ್ದ ದೊಡ್ಡ ಮಟ್ಟದ ಕಾರ್ಯಕರ್ತರು ಆಕ್ರೋಶಗೊಂಡರು. ಡಾ. ಅಂಬೇಡ್ಕರ್‌ ತತ್ವ ಸಿದ್ಧಾಂತ ಹೇಳುತ್ತಾ ಬಿಜೆಪಿಯನ್ನು ವಿರೋಧಿಸುತ್ತಿದ್ದ ಮಹೇಶಣ್ಣ ತಾವೇ ಬಿಜೆಪಿ ಸೇರಿಕೊಂಡು ಗಣವೇಷ ಧರಿಸಿದರಲ್ಲ ಎಂಬ ಸಿಟ್ಟು ಕಾರ್ಯಕರ್ತರಲ್ಲಿತ್ತು. ಜೊತೆಗೆ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳೂ ನಡೆಯಲಿಲ್ಲ. ಬಿಎಸ್‌ಪಿ ಅಭ್ಯರ್ಥಿ ಹಾಕದೇ ಕಾಂಗ್ರೆಸ್‌ ಗೆ ಬೆಂಬಲ ನೀಡಿತು. ಮತದಾರರಿಗೆ ಎ.ಆರ್‌. ಕೃಷ್ಣಮೂರ್ತಿಯವರ ಮೇಲೆ ಅನುಕಂಪವೂ ಇತ್ತು. ಎಲ್ಲವೂ ಸೇರಿಕೊಂಡು ಕಾಂಗ್ರೆಸ್‌ 59 ಸಾವಿರ ಮತಗಳ ಭಾರಿ ಅಂತರದಿಂದ ಜಯಗಳಿಸಿತು.

 ಹನೂರು ಕ್ಷೇತ್ರ: 2018ರ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದಿಂದ ದೂರವಿದ್ದ ಬಿಜೆಪಿಯ ಡಾ. ಕೆ. ಎನ್‌. ಪ್ರೀತನ್‌ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡರು. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಜನಧ್ವನಿ ವೆಂಕಟೇಶ್‌, ಯುವ ಮುಖಂಡ ನಿಶಾಂತ್‌ಗೆ ಈ ಬಾರಿ ಟಿಕೆಟ್‌ ನೀಡಿದ್ದರೆ ಬಿಜೆಪಿಗೆ ವರದಾನವಾಗುತ್ತಿತ್ತು ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿತ್ತು. ಆದರೆ ಅವರಿಬ್ಬರಿಗೂ ಟಿಕೆಟ್‌ ಸಿಗಲಿಲ್ಲ. ಜೆಡಿಎಸ್‌ ಅಭ್ಯರ್ಥಿ ಮಂಜುನಾಥ್‌ ಕಳೆದ ಬಾರಿ ಮೂರನೇ ಸ್ಥಾನ ಪಡೆದರೂ, ಕ್ಷೇತ್ರದಿಂದ ದೂರ ಹೋಗದೇ ಸಂಘಟನೆ, ಜನೋಪಯೋಗಿ ಕೆಲಸಗಳನ್ನು ಮಾಡಿದ್ದು ಅವರ ಗೆಲುವಿಗೆ ಕಾರಣವಾಯಿತು.

ಗುಂಡ್ಲುಪೇಟೆ ಕ್ಷೇತ್ರ: ಕ್ಷೇತ್ರದ ಏಕೈಕ ಬಿಜೆಪಿ ಶಾಸಕರಾಗಿದ್ದ ನಿರಂಜನಕುಮಾರ್‌ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಅವರ ಸುತ್ತ ಇದ್ದ ಆಪ್ತ ಬೆಂಬಲಿಗ ವಲಯಕ್ಕೆ ಆದ್ಯತೆ ನೀಡಿದರು. ಜನ ಸಾಮಾನ್ಯರಿಗೆ ಸ್ಪಂದಿಸಲಿಲ್ಲ ಎಂಬ ಆರೋಪಗಳಿದ್ದವು. ಇತ್ತ, ಅಧಿಕಾರ ಇಲ್ಲದಿದ್ದರೂ, ಕಾಂಗ್ರೆಸ್‌ ಮುಖಂಡ ಗಣೇಶಪ್ರಸಾದ್‌ ಕೋವಿಡ್‌ ಸಂದರ್ಭವೂ ಸೇರಿ ಜನರ ಕಷ್ಟಗಳಿಗೆ ಸ್ಪಂದಿಸಿದರು. ದೇವಾಲಯಗಳ ನಿರ್ಮಾಣ, ಬಡ ಜನರಿಗೆ ನೆರವು, ಅನಾರೋಗ್ಯಕ್ಕೊಳಗಾದವರು, ಮೃತರ ಮನೆಗಳಿಗೆ ಭೇಟಿ ನೀಡಿ ನೆರವು ನೀಡಿದರು ಎಂಬ ಅಂಶಗಳು ಜನರ ಮನಗೆದ್ದವು. ಹೀಗಾಗಿ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಸ್ಥಾನ ಗೆಲ್ಲಲು ಸಾಧ್ಯವಾಗದಿರಲು ಇಡೀ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದದ್ದು ಕಾರಣ. ಜೊತೆಗೆ ಕಾಂಗ್ರೆಸ್‌ ನವರಗ್ಯಾರಂಟಿ ಕಾರ್ಡು ಸಹ. ಅನೇಕ ಕ್ಷೇತ್ರಗಳ ರೀತಿ ಇಲ್ಲೂ ಆ ಅಂಶಗಳುಪರಿಣಾಮ ಬೀರಿದೆ. ಸ್ಥಳೀಯವಾಗಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಹಾಕಿದ್ದೆವು. ಆದರೂ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಲಿಲ್ಲ. ನಾವುಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಮನನ ಮಾಡಿಕೊಳ್ಳುತ್ತಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುತ್ತೇವೆ.-ಜಿ. ನಾರಾಯಣಪ್ರಸಾದ್‌, ಬಿಜೆಪಿ ಜಿಲ್ಲಾಧ್ಯಕ್ಷ

-ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next