Advertisement

BSY ನಂತರ ಪಕ್ಷ ಸಮರ್ಥವಾಗಿ ಮುನ್ನಡೆಸುವವರಿಗಾಗಿ BJP ಹುಡುಕಾಟ: ಪಟ್ಟಿಯಲ್ಲಿದೆ ಹಲವು ಹೆಸರು

08:32 AM Mar 15, 2021 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭವಿಷ್ಯದ ನಾಯಕತ್ವದ ಕುರಿತು ಹೈಕಮಾಂಡ್‌ ಮಟ್ಟದಲ್ಲಿ ಗಂಭೀರ ಚಿಂತನೆ ಆರಂಭವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಂತರ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕನ ಹುಡುಕಾಟವನ್ನು ಬಿಜೆಪಿ ಹೈಕಮಾಂಡ್‌ ಆರಂಭಿಸಿದೆ.

Advertisement

ಈಗಾಗಲೇ ಅಧಿಕಾರದಲ್ಲಿರುವ ಉತ್ತರಾಖಂಡ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿರುವ ಬಿಜೆಪಿ ಹೈಕಮಾಂಡ್‌ ನಾಯಕರು ಕರ್ನಾಟಕದಲ್ಲಿವೂ ಭವಿಷ್ಯದಲ್ಲಿ ಪಕ್ಷವನ್ನು ಮುನ್ನಡೆಸುವವರ ಸಾಮರ್ಥ್ಯ ಮತ್ತು ಪ್ರಭಾವಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರ ಪಟ್ಟಿಯಲ್ಲಿ ದೊಡ್ಡ ಪಡೆಯೇ ಇದೆ. ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರಲ್ಲಿ, ಡಿಸಿಎಂ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಕೆ.ಎಸ್‌.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌, ಪ್ರಹ್ಲಾದ್‌ ಜೋಶಿ, ಮುರುಗೇಶ್‌ ನಿರಾಣಿ, ಜಗದೀಶ್‌ ಶೆಟ್ಟರ್‌ ಅವರ ಹೆಸರು ಮುಂಚೂಣಿಯಲ್ಲಿವೆ.

ಇದನ್ನೂ ಓದಿ:ಸೋಂಕು ಹೆಚ್ಚಳ; ಲಾಕ್‌ಡೌನ್‌, ಕರ್ಫ್ಯೂ ಚರ್ಚೆ ಮುನ್ನೆಲೆಗೆ : ಸಿಎಂ ಎಚ್ಚರದ ಮನವಿ

ಆದರೆ, ಸದ್ಯದ ಹೈಕಮಾಂಡ್‌ ನಾಯಕರ ಪಟ್ಟಿಯಲ್ಲಿ ಒಬ್ಬೊಬ್ಬರ ದೃಷ್ಟಿಕೋನದಲ್ಲಿ ಒಬ್ಬೊಬ್ಬ ನಾಯಕರ ಹೆಸರುಗಳಿವೆ ಎಂದು ತಿಳಿದು ಬಂದಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ , ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹಾಗೂ ರಾಜ್ಯ ಬಿಜೆಪಿ ಯಲ್ಲಿ ಬಂಡಾಯ ನಾಯಕನೆಂದು ಗುರುತಿಸಿಕೊಳ್ಳುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ.

Advertisement

ಯಾವಾಗ ನಾಯಕತ್ವ?: ಬಿಜೆಪಿ ರಾಷ್ಟ್ರೀಯ ನಾಯಕರು ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾಡಿ ಹೊಸ ನಾಯಕರಿಗೆ ಅವಕಾಶ ಕಲ್ಪಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಈಗಾಗಲೇ ಉತ್ತರಾಖಂಡ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿ, ನೇರವಾಗಿ ಹೈಕಮಾಂಡ್‌ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಿದೆ. ಹರಿಯಾಣದಲ್ಲಿಯೂ ಅದೇ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: ದೇಶದಲ್ಲಿ ಡ್ರೋನ್ ಹಾರಾಟಕ್ಕೆ ಹೊಸ ನಿಯಮ ಜಾರಿ

ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಾಯಕತ್ವದ ಬದಲಾವಣೆಯಾಗುತ್ತದೆ ಎಂಬ ಚರ್ಚೆಗಳು ರಾಜ್ಯ ಬಿಜೆಪಿ ವಲಯದಲ್ಲಿ ಆರಂಭವಾಗಿದೆ. ಆದರೆ, ಹೈಕಮಾಂಡ್‌ ನಾಯಕರು 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತಹ ನಾಯಕನನ್ನು ರಾಜ್ಯಾಧ್ಯಕ್ಷ ಗಾದಿಗೆ ಏರಿಸಿ ಅವರ ಮೂಲಕ ಪಕ್ಷ ಮುನ್ನಡೆಸಲು ಯೋಚಿಸಿದ್ದಾರೆ ಎನ್ನಲಾಗಿದೆ.

ಭಾಗವತ್‌ ಭೇಟಿ?: ನಾಯಕತ್ವ ಬದಲಾವಣೆ ಕುರಿತಂತೆ ಬಿಜೆಪಿಯ ಕೆಲವು ಶಾಸಕರು ಆರ್‌ಎಸ್‌ಎಸ್‌ ಸರ ಸಂಘಚಾಲಕ ಮೋಹನ್‌ ಭಾಗವತ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘ ಚಾಲಕ ಮೋಹನ್‌ ಭಾಗವತ್‌ ಅವರನ್ನು ಸುಮಾರು 15ಕ್ಕೂ ಹೆಚ್ಚು ಶಾಸಕರು ಭೇಟಿ ಮಾಡಿ, ರಾಜ್ಯದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಾಗೂ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next