Advertisement

ಸಿಎಂ ಬೊಮ್ಮಾಯಿಗೆ “ಶಾ’ಬ್ಬಾಸ್‌ಗಿರಿ

12:32 AM Jan 29, 2023 | Team Udayavani |

ಚನ್ನಮ್ಮನ ಕಿತ್ತೂರು: ಮಹಾದಾಯಿ ನದಿ ನೀರು ಕರ್ನಾಟಕಕ್ಕೆ ಸಿಗಲು ಕಾಂಗ್ರೆಸ್‌ ಅಡ್ಡಗಾಲು ಹಾಕಿತ್ತು. ಕರ್ನಾಟಕ ಹಾಗೂ ಗೋವಾ ನಡುವಿನ ಹಲವಾರು ವರ್ಷಗಳ ಜಗಳ ಈಗ ಬಗೆಹರಿದು ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಮಹದಾಯಿ ನೀರು ಸಿಗುವಂತೆ ಮಾಡಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕ ಸರಕಾರವನ್ನು ಹಾಡಿ ಹೊಗಳಿದರು.

Advertisement

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಮೈದಾನದಲ್ಲಿ ಶನಿವಾರ ಕಿತ್ತೂರು, ಖಾನಾಪುರ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಜನಸಂಕಲ್ಪ ಯಾತ್ರೆಯ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರಕಾರ ಗೋವಾ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಭಯ ರಾಜ್ಯಗಳ ನೀರಿನ ಸಮಸ್ಯೆ ಬಗೆಹರಿಸಿ ಕರ್ನಾಟಕದ ನೀರು ಕೊಡಿಸಿದ ಕೀರ್ತಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇಲ್ಲಿನ ನಾಯಕರಿಗೆ ಸಲ್ಲುತ್ತದೆ. ಗೋವಾ ಸರಕಾರದ ಸಹಮತದೊಂದಿಗೆ ಈ ವಿವಾದ ಬಗೆಹರಿದಿದೆ ಎಂದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ಏನೂ ಕೊಡುಗೆ ನೀಡಿಲ್ಲ. ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ಸುಮಾರು ಒಂದು ಸಾವಿರ ಕೋಟಿ ರೂ. ಅನುದಾನದಲ್ಲಿ ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲ್ವೆ ಮಾರ್ಗ ಕಾರ್ಯ ಆರಂಭಿಸಿದೆ. ಜತೆಗೆ ಕಿತ್ತೂರಿನಲ್ಲಿ ಒಂದು ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣದಿಂದ 50 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. 520 ಕೋಟಿ ರೂ.ಗಳಲ್ಲಿ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಡೆದಿದೆ.

ಬೈಲಹೊಂಗಲದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ರಾಯಣ್ಣ ಸೈನಿಕ ಶಾಲೆ ನಿರ್ಮಿಸಿದ್ದು, 2023-24ರ ಶೈಕ್ಷಣಿಕ ವರ್ಷದಲ್ಲಿ ಅಲ್ಲಿಂದ ಸೇನಾ ಯೋಧರು ಹೊರ ಹಮ್ಮಲಿದ್ದಾರೆ. ಖಾನಾಪುರದ 100 ಹಳ್ಳಿಗಳಲ್ಲಿ ಕುಡಿ ಯುವ ನೀರಿನ ಯೋಜನೆಗೆ 500 ಕೋಟಿ ರೂ. ನೀಡಲಾಗಿದೆ ಎಂದರು.

ಕರ್ನಾಟಕ ಮತ್ತು ಭಾರತದ ಅಭಿವೃದ್ಧಿ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. 3 ಕೋಟಿ ಜನರಿಗೆ ಮನೆ, ವಿದ್ಯುತ್‌, 10 ಕೋಟಿ ಜನರಿಗೆ ಶೌಚಾಲಯ, 13 ಕೋಟಿ ಜನರಿಗೆ ಸಿಲಿಂಡರ್‌, 60 ಕೋಟಿ ಜನರಿಗೆ ಆಯುಷ್ಮಾನಭವ ಯೋಜನೆಯಡಿ 5 ಲಕ್ಷ ರೂ.ವರೆಗೆ ವಿಮೆ ನೀಡುವ ಕೆಲಸ ಬಿಜೆಪಿ ಮಾಡಿದೆ ಎಂದರು.

Advertisement

ಕಾಂಗ್ರೆಸ್‌-ಜೆಡಿಎಸ್‌ ಕುಟುಂಬ ರಾಜಕಾರಣ
ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಕುಟುಂಬ ರಾಜಕಾರಣದ ಪಕ್ಷಗಳು ಒಂದೆಡೆಯಾದರೆ, ರಾಷ್ಟ್ರ ಭಕ್ತರ ಪಕ್ಷ ಬಿಜೆಪಿ ಮತ್ತೊಂದು ಕಡೆಗೆ ಇದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅಮಿತ್‌ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next