Advertisement

BJP ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ: ಮಂಕಾಳ್ ವೈದ್ಯ

08:36 PM Mar 31, 2024 | Team Udayavani |

ದಾಂಡೇಲಿ: ಜನರಿಗೆ ಏನು ಬೇಕೆಂಬುದನ್ನು ಯೋಚಿಸಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಬಿಜೆಪಿ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಈಗ ಮತ್ತೆ ಸುಳ್ಳನ್ನೇ ಹೇಳಿಕೊಂಡು ಜನರ ಬಳಿ ಬರುತ್ತಾರೆ. ಜಿಲ್ಲೆಯಲ್ಲಿ 30 ವರ್ಷಗಳಿಂದ ನಮ್ಮ ಸಂಸದರು ಈ ಜಿಲ್ಲೆಯಲ್ಲಿ ಇಲ್ಲವೆಂಬುದೇ ನಮ್ಮ ಕೊರತೆಯಾಗಿದೆ.

Advertisement

ಹೀಗಾಗಿ ಅರಣ್ಯ ಅತಿಕ್ರಮಣ ಸೇರಿದಂತೆ ಜಿಲ್ಲೆಯಲ್ಲಿರುವ ಬಹುದೊಡ್ಡ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಮಾತನಾಡಬೇಕಿದೆ. ಈ ಸಮಸ್ಯೆಗಳನ್ನು ಖಂಡಿತ ಡಾ.ಅಂಜಲಿ ನಿಂಬಾಳ್ಕರ್ ಸಂಸದರಾದರೆ ಬಗೆಹರಿಸಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಹೇಳಿದರು.

ನಗರದ ಕಾರ್ಮಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕೇಂದ್ರದಿಂದ 30 ವರ್ಷಗಳಲ್ಲಿ ಒಂದೇ ಒಂದು ಯೋಜನೆ‌ ಜಿಲ್ಲೆಗೆ ಬಂದಿಲ್ಲ. ಸಂಸತ್ ನಲ್ಲಿ ಒಮ್ಮೆಯೂ ಉತ್ತರಕನ್ನಡದ ಹೆಸರು ಬಂದಿಲ್ಲ. 30 ವರ್ಷಗಳ ಬಳಿಕ ಈ ಬಾರಿ ಒಂದು ಅವಕಾಶ ನಮ್ಮ ಪಕ್ಷಕ್ಕೆ ಕೊಟ್ಟರೆ ಡಾ.ನಿಂಬಾಳ್ಕರ್ ಸಂಸತ್ ನಲ್ಲಿ ನಿಮ್ಮ ಧ್ವನಿಯಾಗಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮಾತನಾಡಿ ಕೇವಲ ಸುಳ್ಳು ಹೇಳುವವರು ಬಿಜೆಪಿಗರು. ಸಂತ ಮಹಾತ್ಮರ ಹೆಸರನ್ನು ದುರುಪಯೋಗಪಡಿಸಿಕೊಂಡು ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿಯಿಂದ ಆಗುತ್ತಿದೆ ಕಿಡಿಕಾರಿದರು. ಈ ಚುನಾವಣೆ ಬಿಜೆಪಿ  ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ. ಬಡವರ ಯುವಕರ ಮಹಿಳೆಯರಿಗೆ ಸಿಗಬೇಕಾದ ನ್ಯಾಯದ ಹೋರಾಟವಿದು. ಚುನಾವಣೆ ಬರುತ್ತೆ, ಹೋಗುತ್ತೆ. ಆದರೆ ನಿರಂತರವಾಗಿ ಜನರಿಗೆ ನೆರವಾಗುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಮಾಡಿದ ಕೆಲಸದ ಮೇಲೆ ಮತ ಕೇಳುತ್ತದೆ. ನುಡಿದಂತೆ ಐದು ಗ್ಯಾರಂಟಿಯನ್ನು ಜನರಿಗೆ ಮುಟ್ಟಿಸಿದ್ದೇವೆ. ನಮ್ಮ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಜನ್ ಕೀ ಬಾತ್ ಕೇಳಿದರು, ಬಿಜೆಪಿಗರದ್ದು ಕೇವಲ ಮನ್ ಕೀ ಬಾತ್ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಮಾತನಾಡಿ, ಯಾವುದೇ ಪರಿಸ್ಥಿತಿಯಲ್ಲಿ ಈ ಚುನಾವಣೆಯನ್ನ ಶತಾಯಗತಾಯವಾಗಿ ಗೆಲ್ಲಲೇಬೇಕಿದೆ. ಹಿಂದೆ ಮಹಿಳೆ ಮಾರ್ಗರೇಟ್ ಆಳ್ವಾ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು, ಈ ಬಾರಿಯೂ ಮಹಿಳೆ ಡಾ.ಅಂಜಲಿ ನಿಂಬಾಳ್ಕರ್ ಗೆದ್ದೇ ಗೆಲ್ಲುತ್ತಾರೆ; ಇದು ದೇಶಪಾಂಡೆ ಗ್ಯಾರಂಟಿ ಎಂದರು.

Advertisement

ಭಿನ್ನಾಭಿಪ್ರಾಯ ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. 6 ಬಾರಿ ಬಿಜೆಪಿ ಸಂಸದರು ಆಯ್ಕೆಯಾದರೂ ಏನೂ ಅಭಿವೃದ್ಧಿ ಆಗಿಲ್ಲ. ಸೀಬರ್ಡ್, ಕೈಗಾ ಬಂದಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಆಗಿದ್ದು ನನ್ನ ಅವಧಿಯಲ್ಲಿ. ಮೋದಿ ಸರ್ಕಾರದ 10 ವರ್ಷದಲ್ಲಿ ಉದ್ಯೋಗ ಸೃಷ್ಟಿಯೂ ಆಗಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯೂ ಆಗಿಲ್ಲ. ಅಳ್ನಾವರ  ಧಾರವಾಡ ರೈಲು ಪ್ರಾರಂಭಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ ಬಿಜೆಪಿಗರಿಗೆ ಅಭಿವೃದ್ಧಿ ಮಾಡುವ ಮನಸ್ಥಿತಿಯೇ ಇಲ್ಲ. ಉನ್ನತ ಶಿಕ್ಷಣ ಕಲಿತವರಿದ್ದರೂ ನಿರುದ್ಯೋಗ ತಾಂಡವವಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ‌ ನಿಸ್ವಾರ್ಥದಿಂದ ಪಕ್ಷದ ಹಿತದಿಂದ ಅಭ್ಯರ್ಥಿಯ ಗೆಲುವಿಗೆ ಪಣ ತೊಡಬೇಕು ಎಂದು ಕರೆನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ಮೂರು ದಶಕಗಳಿಂದ ಜಿಲ್ಲೆಯನ್ನು ಆಳಿದ ಬಿಜೆಪಿ ಸಂಸದರ ಕೊಡುಗೆ ಶೂನ್ಯ. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ಕೂಡ ಈ ಹಿಂದೆ ಶಾಸಕರು, ಸಚಿವರಾಗಿ ಜಿಲ್ಲೆಯನ್ನು ಇಬ್ಭಾಗ ಮಾಡಬೇಕು ಎಂದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಗೂ ಮುನ್ನ ಅಂಬೇವಾಡಿಯ ಬಲಮುರಿ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಖಾನಾಪುರ ನಿಮಗೂ ದೂರ ಅಲ್ಲ, ನನಗೂ ಉತ್ತರಕನ್ನಡ ಹೊಸದಲ್ಲ‌. ನಿಮ್ಮ ಮನೆಮಗಳಂತೆ ಆಶೀರ್ವದಿಸಿ ಸಂಸತ್ ಗೆ ಕಳುಹಿಸಿದರೆ ಮೊದಲ ಅಧಿವೇಶನದಲ್ಲೇ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿಯಾಗುವೆ.
-ಡಾ.ಅಂಜಲಿ ನಿಂಬಾಳ್ಕರ್, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next