Advertisement

ಶೈಕ್ಷಣಿಕ ರಂಗ ಹದಗೆಡಿಸಿದ ಬಿಜೆಪಿ ಸರ್ಕಾರ

02:53 PM Jun 07, 2022 | Team Udayavani |

ಬಾಗಲಕೋಟೆ: ಮಕ್ಕಳ ಭವಿಷ್ಯ ರೂಪಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ವ್ಯಕ್ತಿಗಳ ಬಗ್ಗೆ ವಾಸ್ತವದ ಚಿತ್ರಣ ಮುಂದಿಡುವ ಪಠ್ಯಕ್ರಮವನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ರಂಗವನ್ನೇ ಹದಗೆಡಿಸಿದ ಅಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಆರೋಪಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ರಂಗದಲ್ಲಿ ಜ್ಞಾನವೇ ಇಲ್ಲದವರನ್ನು ಪಠ್ಯಕ್ರಮ ಪುನರ್‌ರಚನೆ ಸಮಿ ತಿಗೆ ನೇಮಕ ಮಾಡಿದ ಪರಿಣಾಮ, ತಮ್ಮ ಮನ ಸ್ಸಿಗೆ ತೋಚಿದಂತೆ ಪಠ್ಯಕ್ರಮ ಬದಲಾವಣೆಗೆ ಶಿಫಾರಸು ಮಾಡಿದ್ದಾರೆ. ಇಂತಹ ಸಮಿತಿ ಶಿಫಾ ರಸು ಒಪ್ಪದಿರಲು ಇಡೀ ರಾಜ್ಯಾದ್ಯಂತ ಹೋರಾಟ, ಆಕ್ರೋಶ ಕೇಳಿ ಬಂದ ಬಳಿಕ ಸಮಿತಿ ವಿಸರ್ಜನೆ ಮಾಡಿದರೂ ಅದೇ ಸಮಿತಿ ಸಲ್ಲಿಸಿರುವ ವರದಿ ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯದ ಶಿಕ್ಷಣ ತಜ್ಞರು, ಮೇಧಾವಿಗಳು ತೀವ್ರ ಆತಂಕದಲ್ಲಿದ್ದಾರೆ ಎಂದರು.

ತಜ್ಞರ ಸಮಿತಿ ಅಂದರೆ ಅದರಲ್ಲಿ ಶಿಕ್ಷಣ ಮೇಧಾವಿಗಳು, ಹಲವು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಕೆಲಸ ಮಾಡಿದವರು ಇರ ಬೇಕು. ಅವರು ಸಲ್ಲಿಸುವ ವರದಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು. ಬದಲಾಗಿ, ಶಿಕ್ಷಣ ರಂಗದ ಅಧ್ಯಯನವೇ ಇಲ್ಲದ, ಚಕ್ರ ತೀರ್ಥ ಎಂಬುವವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಎಷ್ಟು ಸಮಂಜಸ. ಈ ಸಮಿತಿಗೆ ನೇಮಕ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ಪ್ರಶ್ನಿಸಿದರು.

ಮಕ್ಕಳಿಗೆ ಈ ದೇಶದ ಮೇಧಾವಿಗಳ ಬಗ್ಗೆ ಜ್ಞಾನ ನೀಡಬೇಕು. ಆದರೆ, ಸಾಮಾನ್ಯರನ್ನು ಅಸಮಾನ್ಯರಂತೆ, ಅಸಾಮಾನ್ಯರನ್ನು ಸಾಮಾನ್ಯ ರಂತೆ ಬಿಂಬಿಸುವ ಕೆಲಸ ಬಿಜೆಪಿ ಸರ್ಕಾರ ಮಾಡು ತ್ತಿದೆ. ಚಕ್ರತೀರ್ಥ ಎಂಬಾತ, ಇಡೀ ಶೈಕ್ಷಣಿಕ ರಂಗಕ್ಕೆ ಗಬ್ಬು ತೀರ್ಥ ನೀಡಿದ್ದಾರೆ. ಹೆಡಗೆವಾರ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹುಟ್ಟು ಹಾಕಿದ್ದಾರೆ. ಆದರೆ, ಅವರಿಂದ ಈ ದೇಶಕ್ಕೆ ಏನು ಕೊಡುಗೆ ಇದೆ. ಅವರ ಹೆಸರು ಪಠ್ಯಕ್ರಮದಲ್ಲಿ ಸೇರಿಸುವ ಅಗತ್ಯವೇ ಇರಲಿಲ್ಲ. ಭಗತ್ ಸಿಂಗ್‌ ಅವರಂತಹ ವ್ಯಕ್ತಿಗಳು ಈ ದೇಶದ‌ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಜೈಲಿನಲ್ಲಿದ್ದಾಗಲೇ 200ಕ್ಕೂ ಹೆಚ್ಚು ಪುಸ್ತಕ ಓದಿದ್ದಾರೆ. ಅಂತಹ ಮಹಾನ್‌ ನಾಯಕರ ಬಗ್ಗೆ ಪಠ್ಯಕ್ರಮ ದಲ್ಲಿ ಇರಬೇಕು. ಆಗ ಮಕ್ಕಳಲ್ಲಿ ದೇಶಾಭಿಮಾನವೂ ಬೆಳೆಯುತ್ತದೆ. ಆದರೆ, ದೇಶಕ್ಕೆ ಯಾವ ಕೊಡುಗೆಯೂ ಇಲ್ಲದ ವ್ಯಕ್ತಿಗಳನ್ನು ಪಠ್ಯಕ್ರಮ ದಲ್ಲಿ ಸೇರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುವೆಂಪು ಅವರು ಈ ನಾಡಿನ ಮಹಾನ್‌ ಸಾಹಿತಿ. ಅವರ ಕೃತಿಗಳನ್ನು ಓದಿದವರಿಗೆ ಅರ್ಥವಾಗುತ್ತದೆ. ಈ ದೇಶಕ್ಕೆ ಸಂವಿಧಾನ ನೀಡಿದ ಮಹಾನ್‌ ನಾಯಕ ಡಾ| ಅಂಬೇಡ್ಕರ್‌ ಅವರ ಹೆಸರಿನ ಮುಂದೆ ಇದ್ದ ಸಂವಿಧಾನ ಶಿಲ್ಪಿ ಎಂಬ ಪದವೇ ತೆಗೆದು ಹಾಕಲಾಗಿದೆ. ಆ ಮೂಲಕ ಅಂಬೇಡ್ಕರ್‌ ಅವರಿಗೂ ಅವ ಮಾನ ಮಾಡಲಾಗಿದೆ ಎಂದು ಆರೋಪಿಸಿದರು.

Advertisement

ಪಠ್ಯಕ್ರಮದ ಕುರಿತು ಇಡೀ ರಾಜ್ಯಾದ್ಯಂತ ತೀವ್ರ ಆತಂಕ, ಚರ್ಚೆ ನಡೆಯುತ್ತಿದ್ದರೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಷ ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪಠ್ಯ ಕ್ರಮ ಪುನರ್‌ ರಚನಾ ಸಮಿತಿಯಲ್ಲಿದ್ದ ಅರವಿಂದ ಮಾಲಗತ್ತಿ, ಕೋ. ಚನ್ನಬಸಪ್ಪ ಅವರಂತಹ ಅತ್ಯು ತ್ತಮ ಸಾಹಿತಿಗಳನ್ನು ಸಮಿತಿಯಿಂದ ಕೈಬಿಡಲಾಗಿದೆ. ಆ ಮೂಲಕ ಹಿರಿಯ ಸಾಹಿತಿಗಳಿಗೆ ಅವಮಾನ ಮಾಡಲಾಗಿದೆ ಎಂದರು.

ವ್ಯರ್ಥ ಚರ್ಚೆ ಬೇಡ: ರಾಜ್ಯದಲ್ಲಿ ಸಧ್ಯ ಚಡ್ಡಿ ಸುಡುವ ಅಭಿಯಾನ ಕುರಿತು ಚರ್ಚೆ ನಡೆಯುತ್ತಿದೆ. ಇದೊಂದು ವ್ಯರ್ಥ ಚರ್ಚೆ. ನಾನು ಆರ್‌ ಎಸ್‌ಎಸ್‌ ಬಗ್ಗೆ ಟೀಕೆ ಮಾಡಲ್ಲ. ಅದೊಂದು ದೇಶದ್ರೋಹ ಸಂಘಟನೆ ಎಂದೂ ಹೇಳಲ್ಲ. ರಾಜ್ಯಕ್ಕೆ ಬೇಕಿರುವುದು ಅಭಿವೃದ್ಧಿ ಕುರಿತ ಚರ್ಚೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಚರ್ಚೆ ಅನಗತ್ಯ ಎಂದು ಹೇಳಿದರು.

ಪ್ರಾರ್ಥನಾ ಮಂದಿರಗಳ ಮೇಲಿನ ಧ್ವನಿವರ್ಧಕ ಬಂದ್‌ ಮಾಡಬೇಕು. ಇಲ್ಲದಿದ್ದರೆ ಗುಂಡು ಹಾಕುತ್ತಿದ್ದೇವೆ ಎಂದು ಬಹಿರಂಗವಾಗಿ ಪ್ರಮೋದ್ ಮುತಾಲಿಕ ಹೇಳುತ್ತಿದ್ದಾರೆ. ಗುಂಡು ಹಾರಿಸುತ್ತೇವೆ, ಕುತ್ತಿಗೆ ಕತ್ತರಿಸುತ್ತೇವೆ ಎಂದೆಲ್ಲ ಹೇಳುವವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ‌

ಮಾಜಿ ಸಚಿವ ಎಚ್‌.ವೈ. ಮೇಟಿ, ಸೇವಾದಳ ಘಟಕದ ಜಿಲ್ಲಾಧ್ಯಕ್ಷ ಎನ್‌.ಬಿ. ಗಸ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಹಾಗೂ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಇತರರು ಉಪಸ್ಥಿತರಿದ್ದರು.

ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ನಿಮಿತ್ತ ಜೂ. 7ರಂದು ಸಂಜೆ 4ಕ್ಕೆ ಗದ್ದನಕೇರಿ ಕ್ರಾಸ್‌ ಬಳಿಯ ಲಡ್ಡುಮುತ್ಯಾ ದೇವಸ್ಥಾನದಲ್ಲಿ ಮತಯಾಚನೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಭಾಗವಹಿಸಲಿದ್ದಾರೆ. ಜಿಲ್ಲೆಯ ಶಿಕ್ಷಕ ಮತ್ತು ಪದವೀಧರ ಮತದಾರರು ಭಾಗವಹಿಸಿ, ಕಾಂಗ್ರೆಸ್‌ ಪಕ್ಷದ ಶಿಕ್ಷಕರ ಕ್ಷೇತ್ರದ ಪ್ರಕಾಶ ಹುಕ್ಕೇರಿ, ಪದವೀಧರ ಕ್ಷೇತ್ರದ ಸಂಕ ಅವರಿಗೆ ಮತ ಹಾಕಿ ಗೆಲ್ಲಿಸಬೇಕು. –ಎಚ್‌.ವೈ. ಮೇಟಿ, ಮಾಜಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next