Advertisement

ಸದ್ಯದಲ್ಲೇ ಬಿಜೆಪಿ ಸರ್ಕಾರ ರಚನೆ

01:28 AM Jul 15, 2019 | Lakshmi GovindaRaj |

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರ ಸಂಖ್ಯಾಬಲ ಕಳೆದುಕೊಂಡಿದ್ದು, ಸದ್ಯದಲ್ಲೇ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಹಾಗಾಗಿ, ಎಲ್ಲ ಶಾಸಕರು ಒಟ್ಟಿಗೆ ಇದ್ದು, ಒಗ್ಗಟ್ಟಿನಿಂದ ಮುಂದುವರಿಯೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕರಿಗೆ ಹೇಳಿದ್ದಾರೆ.

Advertisement

ಯಲಹಂಕ ಬಳಿಯ ರಮಡಾ ರೆಸಾರ್ಟ್‌ನಲ್ಲಿ ಭಾನುವಾರ ಸಂಜೆ ಶಾಸಕರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ಎಲ್ಲ ಶಾಸಕರು ಸದನ ಕಲಾಪದ ವೇಳೆ ನಿಯಮಾನುಸಾರ ನಡೆದುಕೊಳ್ಳಬೇಕು. ತಾಳ್ಮೆ ಕಳೆದುಕೊಳ್ಳದೆ, ವಿಚಲಿತರಾಗದೆ ಹಿರಿಯ ನಾಯಕರ ಸೂಚನೆಯಂತೆ ನಡೆದುಕೊಳ್ಳಬೇಕು. ಸದ್ಯದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಲ್ಲರಿಗೂ ಒಳಿತಾಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಗಳು ಬುಧವಾರ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರವೇ ವಿಶ್ವಾಸಮತ ಯಾಚಿಸುವಂತೆ ಒತ್ತಡ ಹೇರಲು ಬಿಜೆಪಿ ನಿರ್ಧರಿಸಿದೆ.

ಸದನ ಸಲಹಾ ಸಮಿತಿಯಲ್ಲೂ ಇದೇ ವಿಚಾರ ಪ್ರಸ್ತಾಪಿಸಿ, ಸರ್ಕಾರಕ್ಕೆ ಬಹುಮತವಿಲ್ಲದ ಕಾರಣ ತಕ್ಷಣವೇ ವಿಶ್ವಾಸಮತ ಯಾಚನೆಗೆ ಮುಂದಾಗುವಂತೆ ಆಗ್ರಹಿಸಲು ತೀರ್ಮಾನಿಸಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ರೆಸಾರ್ಟ್‌ನಿಂದ ಬಿಜೆಪಿ ಶಾಸಕರು ವಿಧಾನಸಭೆಗೆ ಆಗಮಿಸಲಿದ್ದಾರೆ. ಪಕ್ಷದ ಹಿರಿಯ ನಾಯಕರು ಚರ್ಚಿಸಿ ಸದನದಲ್ಲಿ ಬಿಜೆಪಿ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರು ಒಟ್ಟಾಗಿದ್ದು, ವಾಪಸ್ಸಾಗುವ ಪ್ರಶ್ನೆಯೇ ಇಲ್ಲ. ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳು ಅನುಕೂಲಕರವಾಗಿರುವುದರಿಂದ ನಾವೆಲ್ಲಾ ಖುಷಿ, ನೆಮ್ಮಂದಿಯಿಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ನಗರದ ಡಾಲರ್ ಕಾಲೋನಿ ನಿವಾಸದ ಬಳಿ ಭಾನುವಾರ ರಾತ್ರಿ ಮಾತನಾಡಿದ ಅವರು, ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ನಡೆಸಲಿದೆ. ಮೂರ್‍ನಾಲ್ಕು ದಿನದಲ್ಲಿ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ಜನರ ಸೇವೆ ಮಾಡುವ ಅವಕಾಶ ಸಿಕ್ಕರೆ ಒಳ್ಳೆಯದು. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸದ ಬಳಿ ಪ್ರತಿಕ್ರಿಯಿಸಿದ ಶಾಸಕ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಪತನಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ ಇಲ್ಲವೇ ಮಂಗಳವಾರ ಸ್ಪೀಕರ್‌ ವಿಶ್ವಾಸಮತ ಯಾಚನೆಗೆ ಕಾಲ ನಿಗದಿಪಡಿಸುವ ವಿಶ್ವಾಸವಿದೆ. ಜನರ ಆಕಾಂಕ್ಷೆ, ಆಸೆ ಈಡೇರುವ ಕಾಲ ಬಂದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next