Advertisement

ಕನ್ನಡದ ರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧ

05:27 PM Apr 17, 2022 | Team Udayavani |

ಅಕ್ಕಿಆಲೂರು: ನಾಡಿನ ಪರಂಪರೆ ಹಾಗೂ ಶ್ರೀಮಂತಿಕೆಯನ್ನು ದೇಶಕ್ಕೆ ಪರಿಚಯಿಸುವ ಮತ್ತು ಕನ್ನಡತನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯೋಗ್ಯ ಆಡಳಿತ ನೀಡಲು ರಾಜ್ಯ ಬಿಜೆಪಿ ಸರ್ಕಾರ ಸದಾ ಸನ್ನದ್ಧವಾಗಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.

Advertisement

ಪಟ್ಟಣದ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾ ಸಂಘ ಆಯೋಜಿಸಿರುವ ಕನ್ನಡ ನುಡಿ ಸಂಭ್ರಮ-30ರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ ಮತ್ತು ಭಾಷೆಯ ಕುರಿತಾಗಿ ಅನ್ಯ ರಾಜ್ಯಗಳು ತೆಗೆಯುತ್ತಿರುವ ಖ್ಯಾತೆಗೆ ರಾಜ್ಯ ಸರ್ಕಾರ ಪಕ್ಷಾತೀತವಾಗಿ ಯೋಗ್ಯ ಉತ್ತರ ನೀಡಲು ಸದಾ ಸನ್ನದ್ಧವಾಗಿದೆ. ರಾಷ್ಟ್ರೀಯ ಮನೋಧರ್ಮ ಮತ್ತು ನಾಡಾಭಿಮಾನ ರಕ್ಷಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಎಂದಿಗೂ ಹಿಂದೆ ಬೀಳಲ್ಲ. ಕನ್ನಡ ಭಾಷೆ ತಾಯಿಯ ಹೃದಯವಂತಿಕೆ ಹೊಂದಿದ್ದು, ಕನ್ನಡ ಸಂರಕ್ಷಣೆ ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡತನ ಜಾಗೃತಿಯನ್ನು ಸರ್ಕಾರ ಪರಿಣಾಮಕಾರಿಯಾಗಿ ಮಾಡಬಹುದು. ಆದರೆ, ಅನುಷ್ಠಾನಗೊಳಿಸಬೇಕಿರುವ ಜನತೆಯಲ್ಲಿ ಕನ್ನಡ ಪ್ರತಿಪಾದನೆಯ ಭಾವ ಒಡಮೂಡಬೇಕು. ಗ್ರಾಮೀಣ ಪ್ರದೇಶಗಳು ಆಧುನಿಕ ಮಾಧ್ಯಮಗಳಿಂದ ವಿಮುಕ್ತವಾಗಿ ಮತ್ತೆ ಜನಪದ ಸಾಹಿತ್ಯದತ್ತ ಮುಖ ಮಾಡುತ್ತಿರುವುದು ಕನ್ನಡದ ಉಳಿವಿಗೆ ನಾಂದಿಯಾಗಿದೆ ಎಂದರು.

ಕುಡಚಿ ಶಾಸಕ ಪಿ.ರಾಜೀವ್‌ ಮಾತನಾಡಿ, ಪೊಲೀಸ್‌ ಇಲಾಖೆಗೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತು ಸೋತು ದಿವಾಳಿಯಾಗಿದ್ದ ನನಗೆ, ಇತಿಹಾಸದ ಅಧ್ಯಯನ ಆತ್ಮಬಲ ಹೆಚ್ಚಿಸಿತು. ಅಂಕ, ಪರೀಕ್ಷೆ ಮತ್ತು ನೌಕರಿಯ ಹೊರತಾಗಿಯೂ ಒಂದು ಅದ್ಭುತ ಪ್ರಪಂಚವಿದ್ದು, ಮಕ್ಕಳಿಗೆ ಅದನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂಬ ಮನವಿ ಪಾಲಕರಲ್ಲಿ ಸದಾ ಇದೆ. ಸಂವಿಧಾನ ಭಾರತದ ಭವಿಷ್ಯ ಉಜ್ವಲಗೊಳಿಸಿದಂತಹ ಮೇರುಗ್ರಂಥ. ಅದರ ಅರ್ಥ ಮತ್ತು ವ್ಯಾಪ್ತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ನಿರ್ಮಾಣವಾಗಬೇಕೆಂದರು.

ಇದೇ ವೇಳೆ ಪಟ್ಟಣದ ಮುರುಗೇಶ ದುರ್ಗದ ಅವರ ಅಂಬೇಗಾಲು ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೆಎಎಸ್‌ ಅಧಿಕಾರಿ ಡಾ|ಸಿ.ಸೋಮಶೇಖರ, ಸಾಹಿತ್ಯ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಬೆಳೆಸಲ್ಲ. ವ್ಯಕ್ತಿಯೊಬ್ಬ ಬೆಳೆದಾಗ, ಬಲಿತಾಗ ಇಡೀ ಸಮಾಜ ಬೆಳಗುತ್ತದೆ ಎಂಬ ಕಲ್ಪನೆ ಮೂಲಕ ನಮ್ಮ ಸಾಹಿತ್ಯದ ಅನೇಕ ಪ್ರಕಾರಗಳು ರೂಪುಗೊಂಡಿವೆ ಎಂದು ಹೇಳಿದರು.

Advertisement

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಕಳೆದ ಕೆಲ ವರ್ಷಗಳಿಂದ ಸ್ತಬ್ಧವಾಗಿರುವ ದಸರಾ ನಾಡಹಬ್ಬವನ್ನು ಮತ್ತೆ ಆಯೋಜಿಸುವ ಕುರಿತು ಅಭಿಲಾಷೆ ಹೊಂದಿದ್ದೇನೆ. ಎಲ್ಲರ ಸಹಕಾರದಿಂದ ಕನ್ನಡ ನಾಡು-ನುಡಿಯ ಹಬ್ಬವಾಗಿರುವ ದಸರಾ ನಾಡಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸುತ್ತೇವೆ ಎಂದರು.

ವಿರಕ್ತಮಠದ ಶಿವಬಸವ ಶ್ರೀ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಮಾಜಿ ಶಾಸಕ ಶಿವರಾಜ ಸಜ್ಜನರ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಹರಿಜನ, ಉಪಾಧ್ಯಕ್ಷ ಮುನೀರಸಾಬ ಬಾಳೂರ, ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘದ ಅಧ್ಯಕ್ಷ ಬಸವರಾಜ ಕೋರಿ, ಉದಯಕುಮಾರ ವಿರುಪಣ್ಣವರ, ರಾಜಶೇಖರ ಸಾವಕ್ಕನವರ, ಪ್ರಕಾಶ ಶೆಟ್ಟಿ, ಕೃಷ್ಣ ಈಳಿಗೇರ, ಎ.ಎಸ್‌.ಬಳ್ಳಾರಿ, ಕೆಜಿಎಫ್‌ ಖ್ಯಾತಿಯ ಚಿತ್ರನಟಿ ಅರ್ಚನಾ ಜೋಯಿಸ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next