ಹನೂರು: ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಮಂಜೂರಾಗಿದ್ದ 116ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಬಿಜೆಪಿ ಸರ್ಕಾರ ತಡೆಹಿಡಿದಿದ್ದು, ಕೂಡಲೇ ಆ ಅನುದಾನವನ್ನು ಬಿಡುಗಡೆ ಮಾಡಲು ಕ್ರಮವಹಿಸುವಂತೆ ಸಿಎಂ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ನರೇಂದ್ರ ತಿಳಿಸಿದರು.
ತಾಲೂಕಿನ ಉಡುತೊರೆಹಳ್ಳ ಜಲಾಶಯಕ್ಕೆ ಬಾಗಿನ ಅರ್ಪಿಸಲು ತೆರಳಿದ್ದ ವೇಳೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು ಮತ್ತು ಸದಸ್ಯರು ಶಾಸಕ ನರೇಂದ್ರ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದರು.
ರೈತ ಸಂಘದ ಕಾಂಚಳ್ಳಿ ಗ್ರಾಮ ಘಟಕದ ಅಧ್ಯಕ್ಷ ಬಸವರಾಜು ಮಾತನಾಡಿ, ಅಜ್ಜೀಪುರ ಉಡುತೊರೆಹಳ್ಳ ಜಲಾಶಯ ಮಾರ್ಗದ ರಸ್ತೆ ಹದಗೆಟ್ಟಿದ್ದು ಶೀಘ್ರ ರಸ್ತೆ ಅಭಿವೃದ್ಧಿಪಡಿಸಬೇಕು, ರಸ್ತೆ ಇಕ್ಕೆಲಗಳಲ್ಲಿ ಜಂಗಲ್ ಕಟಿಂಗ್ ಮಾಡಲು ಕ್ರಮವಹಿಸಬೇಕು, ಬೇಸಿಗೆ ಬೆಳೆಗೆ ನಿಯಮಿತವಾಗಿ ನೀರು ನೀಡಲು ಕ್ರಮವಹಿಸಬೇಕು, ಎಡದಂಡೆ ಮತ್ತು ಬಲದಂಡೆಗಳಿಗೆ ನೀರು ಹರಿಸಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬೇಕು,
ಗಂಗನದೊಡ್ಡಿ, ಬಸ್ಪಪ್ಪನದೊಡ್ಡಿ ಗ್ರಾಮಗಳ ಚಾನಲ್‌ಗಳಲ್ಲಿ ಹೂಳು ತೆಗೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನರೇಂದ್ರ, ಜಲಾಶಯದಿಂದ ನೀರು ಹರಿಸಲು ಸಿಬ್ಬಂದಿ ನೇಮಕ ಮಾಡಲು, ಚಾನಲ್‌ನಲ್ಲಿ ಹೂಳು ತೆಗೆಸಲು ಹಾಗೂ ನಿಯಮಿತವಾಗಿ ನೀರು ಹರಿಸಲು ಕ್ರಮವಹಿಸುವ ಭರವಸೆ ನೀಡಿದರು.
ಸಿಬ್ಬಂದಿ ವಿರುದ್ಧ ಗರಂ: ಇದೇ ವೇಳೆ ಜಲಾಶಯದಿಂದ ನೀರು ಬಿಡಲು ನೇಮಕ ಮಾಡಿರುವ ವ್ಯಕ್ತಿ ಕಳೆದ ವರ್ಷ ಇಲಾಖಾ ಅಧಿಕಾರಿಗಳ ಗಮನಕ್ಕೂ ತಾರದೇ ರೈತರಿಂದ ಹಣ ಪಡೆದು ತನ್ನ ಇಚ್ಛಾನುಸಾರ ನೀರು ಹರಿಸಿ ಜಲಾಶಯದ ನೀರನ್ನು ವ್ಯರ್ಥ ಮಾಡಿರುವುದು ತನ್ನ ಗಮನಕ್ಕೆ ಬಂದಿದೆ.
ಒಂದೊಮ್ಮೆ ಈ ವರ್ಷವೂ ತಪ್ಪು ಮರುಕಳಿಸಿ ಜಲಾಶಯದ ನೀರನ್ನು ವ್ಯರ್ಥ ಮಾಡಿದ್ದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಜಿಪಂ ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ನಟರಾಜು, ರೈತ ಸಂಘದ ಪದಾಧಿಕಾರಿಗಳಾದ ಸೋಮಣ್ಣ, ಶಿವಲಿಂಗ, ರಾಜು, ಶಂಕರಪ್ಪ, ರಾಮು, ಚಿನ್ನಣ್ಣ, ಚಂದ್ರ, ಕಾಂತರಾಜು, ರವಿ, ರಮೇಶ್, ನಾರಾಯಣ್ ಇದ್ದರು.