ನವದೆಹಲಿ: “ಸ್ವಲ್ಪ ಯೋಚಿಸಿ, ಭಾರತೀಯ ಜನತಾ ಪಕ್ಷ ದೆಹಲಿಗೆ ಬೆಟ್ಟದಷ್ಟು ಕಸದ ರಾಶಿಯನ್ನು ಹೊರತುಪಡಿಸಿ ಬೇರೆ ಏನೂ ಕೊಡುಗೆ ನೀಡಿಲ್ಲ. ಒಂದು ಬಾರಿ ನಿಮ್ಮ ಪಕ್ಷವನ್ನು ಮರೆತು, ದೇಶಕ್ಕಾಗಿ ಮತ ಚಲಾಯಿಸಿ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ (ಅಕ್ಟೋಬರ್ 27) ಉತ್ತರಪ್ರದೇಶದ ಘಾಜಿಪುರದ ಕಸ ರಾಶಿ ಹಾಕುವ ಸ್ಥಳಕ್ಕೆ ಆಗಮಿಸಿದ ವೇಳೆ ಬಿಜೆಪಿ ಬೆಂಬಲಿಗರಿಗೆ ಈ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನ.11 ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ
ಮುಂಬರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ರಾಜಧಾನಿ ನವದೆಹಲಿಯ ಅತೀ ದೊಡ್ಡ ಗಾರ್ಬೆಜ್ ಡಮ್ಸ್ (ಕಸದ ರಾಶಿ ಹಾಕುವ) ಸ್ಥಳಕ್ಕೆ ಭೇಟಿ ನೀಡಿರುವುದಾಗಿ ವರದಿ ಹೇಳಿದೆ.
ಕಳೆದ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ದೆಹಲಿಯಾದ್ಯಂತ ಕಸದ ರಾಶಿ ತುಂಬಿಸಿ ಇಟ್ಟಿದೆ. ಆ ಹಿನ್ನೆಲೆಯಲ್ಲಿ ನಾನು ಇಂದು ಘಾಜಿಪುರದ ಬೃಹತ್ ಕಸದ ರಾಶಿಯನ್ನು ವೀಕ್ಷಿಸಲು ಆಗಮಿಸಿರುವುದಾಗಿ ಕೇಜ್ರಿವಾಲ್ ಹೇಳಿದರು.
ಒಂದು ದಿನ ಸಂಬಿತ್ ಪಾತ್ರಾ ಕೂಡಾ ಬಿಜೆಪಿ ಕೊಳಕು ಪಕ್ಷ, ಆಮ್ ಆದ್ಮಿ ಒಳ್ಳೆಯ ಪಕ್ಷ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಎಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಆಮ್ ಆದ್ಮಿ ಪಕ್ಷದ ಜತೆ ಕೈಜೋಡಿಸುವ ದಿನ ಬರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.