ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಡಿಎಂಕೆ ಅಲ್ಲದ, ಎಐಎಡಿಎಂಕೆಯೇತರ ಬಣವನ್ನು ರೂಪಿಸುವ ಪ್ರಯತ್ನದಲ್ಲಿರುವ ಬಿಜೆಪಿ ಸೋಮವಾರ ಜಿ.ಕೆ. ವಾಸನ್ ನೇತೃತ್ವದ ತಮಿಳು ಮಾಣಿಲ ಕಾಂಗ್ರೆಸ್ (ಟಿಎಂಸಿ) ಜತೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಇನ್ನಷ್ಟು ಸಂಘಟನೆಗಳು ಎನ್‌ಡಿಎ ಸೇರಲಿವೆ ಎಂದು ಪ್ರಾದೇಶಿಕ ಪಕ್ಷ ಭರವಸೆ ವ್ಯಕ್ತಪಡಿಸಿದೆ.
ಬಿಜೆಪಿ ರಾಜ್ಯ ಘಟಕ ವಾಸನ್ ಅವರನ್ನು ಶ್ಲಾಘಿಸಿ, ಮೈತ್ರಿಗೆ ಮಾರ್ಗದರ್ಶನ ನೀಡಲು ಮುಂದಿನ ದಿನಗಳಲ್ಲಿ ಅವರ ಸಲಹೆಯನ್ನು ಬಳಸಲಾಗುವುದು ಎಂದು ಹೇಳಿದೆ.
1996 ರಲ್ಲಿ ಹಿರಿಯ ನಾಯಕ, ದಿವಂಗತ ಜಿ.ಕೆ. ಮೂಪನಾರ್ ಅವರು ಚುನಾವಣೆಗೆ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಹೊರ ಬಂದು ಟಿಎಂಸಿಯನ್ನು ಪ್ರಾರಂಭಿಸಿದ್ದರು. ಆದರೆ, ಅದು 2002ರಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತ್ತು. ಆದರೆ ಜಿ.ಕೆ.ವಾಸನ್ 2014ರಲ್ಲಿ ರಾಷ್ಟ್ರೀಯ ಪಕ್ಷವನ್ನು ತೊರೆದು ಅದನ್ನು ಪುನರುಜ್ಜೀವನಗೊಳಿಸಿದ್ದರು.
ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೆಪ್ಟೆಂಬರ್ 2023 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ್ದರು.
2014 ರ ಸಂಸತ್ತಿನ ಚುನಾವಣೆಗೆ ಬಿಜೆಪಿ ಬಹುಪಕ್ಷೀಯ ಒಕ್ಕೂಟ ರಚಿಸಿತ್ತು. ಡಿಎಂಡಿಕೆ, ಎಂಡಿಎಂಕೆ ಮತ್ತು ಪಿಎಂಕೆ ಘಟಕಗಳನ್ನು ಒಳಗೊಂಡ ಹೊರತಾಗಿಯೂ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಚುನಾವಣೆಯಲ್ಲಿ 37 ಸ್ಥಾನ ಗೆದ್ದು ಭಾರೀ ಜಯಗಳಿಸಿದ ಕಾರಣ ಎನ್ ಡಿಎ ಬಣ ಮೋದಿ ಅಲೆಯ ಹೊರತಾಗಿಯೂ ತಮಿಳುನಾಡಿನಲ್ಲಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.