Advertisement

BJP: ನಾಲ್ಕು ತಂಡಗಳಾಗಿ ಬಿಜೆಪಿ ಹೋರಾಟ

01:19 AM Sep 13, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವೈಫ‌ಲ್ಯಗಳ ವಿರುದ್ಧ ರಣಕಹಣೆ ಮೊಳಗಿಸುವುದಕ್ಕೆ ಬಿಜೆಪಿ ಸನ್ನದ್ಧವಾಗಿದ್ದು, ಬರ ಹಾಗೂ ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ನಾಲ್ಕು ತಂಡಗಳಾಗಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

Advertisement

ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸೆ. 18ರಂದು ಕೋಲಾರದ ಕುರುಡುಮಲೈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಯಡಿಯೂರಪ್ಪನವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ.

ನಾಲ್ಕು ಹಂತ
ಹೋರಾಟವನ್ನು ನಾಲ್ಕು ಹಂತದಲ್ಲಿ ನಡೆಸುವುದಕ್ಕೆ ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸೆ. 18ರಂದು ಪೂಜೆ ಸಲ್ಲಿಸಿದ ಬಳಿಕ ಮತ್ತೂಮ್ಮೆ ಸಭೆ ಸೇರಿ ಹೋರಾಟದ ಸ್ವರೂಪ ನಿರ್ಧರಿಸಲಾಗುತ್ತದೆ. ಸಭೆಯ ಆರಂಭದಲ್ಲಿ ಚಂದ್ರಯಾನ-3 ಹಾಗೂ ಆದಿತ್ಯ ಎಲ್‌ಒನ್‌ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ರಾಜೀನಾಮೆಗೆ ಒತ್ತಾಯ
ಎಸ್‌ಸಿ, ಎಸ್‌ಟಿ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಚಿವ ಸುಧಾಕರ್‌ ಅವರನ್ನು ಸಂಪುಟದಿಂದ ಕೈ ಬಿಡುವವರೆಗೂ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಪ್ರಕರಣದಿಂದ ಸಿದ್ದರಾಮಯ್ಯನವರ ದ್ವಿಮುಖ ನೀತಿ ಅನಾವರಣಗೊಂಡಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಆಂತರಿಕ ಗೊಂದಲದಿಂದ ಆಡಳಿತಕ್ಕೆ ಇತಿಶ್ರೀ

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಆಡಳಿತಕ್ಕೆ ಬಂದು 3 ತಿಂಗಳಿನಲ್ಲಿ ಇಷ್ಟು ಜನವಿರೋಧಿ ಸರಕಾರವನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನಾನು ಕಂಡಿಲ್ಲ. ಅಂತೂ ಇಂತೂ ಕರ್ನಾಟಕದಲ್ಲಿ ಅತೀ ಶೀಘ್ರವಾಗಿ ಅವರ ಆಂತರಿಕ ಗೊಂದಲಗಳಿಂದಲೇ ಆಡಳಿತಕ್ಕೆ ಇತಿಶ್ರೀ ಆಗಲಿದೆ ಎಂಬ ಬಲವಾದ ನಂಬಿಕೆ ನನ್ನದು ಎಂದು ತಿಳಿಸಿದರು.

ಹರಿಪ್ರಸಾದ್‌, ಡಿ.ಕೆ. ಶಿವಕುಮಾರ್‌, ರಾಯರೆಡ್ಡಿ, ಇನ್ನೂ ಹಲವು ಮಂದಿ ಸಿದ್ದರಾಮಯ್ಯರ ವಿರುದ್ಧ ಕಾಲ್ಕೆರೆದು ನಿಂತು ಜಗಳವಾಡುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಭ್ರಮ ನಿರಸನಗೊಂಡಿದ್ದಾರೆ. ಸಿದ್ದರಾಮಯ್ಯ ರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂಬಂತಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ಪೂರಕವಲ್ಲ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಸದಾನಂದ ಗೌಡ ಹೇಳಿದರು. ಸಂಸದ ಪ್ರತಾಪ ಸಿಂಹ, ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್‌, ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ನೆ.ಲ. ನರೇಂದ್ರ ಬಾಬು, ಎನ್‌. ರವಿಕುಮಾರ್‌ ಸೇರಿ ಹಲವರು ಭಾಗವಹಿಸಿದ್ದರು.

ಅನಿಷ್ಟ ಸರಕಾರದ ವಿರುದ್ಧ ಹೋರಾಡಲು ಮೈತ್ರಿ ಅನಿವಾರ್ಯ: ಬೊಮ್ಮಾಯಿ
ಈ ಅನಿಷ್ಟ ಸರಕಾರದ ವಿರುದ್ಧ ಹೋರಾಟದ ಆವಶ್ಯಕತೆ ಇದೆ. ಹಾಗಾಗಿ ಜೆಡಿಎಸ್‌ ಜತೆ ಮೈತ್ರಿ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಎರಡೂ ವಿಪಕ್ಷಗಳು ಒಂದಾಗಬೇಕು ಎಂಬ ನಿರೀಕ್ಷೆ ಇದೆ. ಮುಂದಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ ಎಂದರು. ಈಗ ಐಎನ್‌ಡಿಐಎ ಒಕ್ಕೂಟ ಒಗ್ಗಟ್ಟಾಗಿದ್ದಾರೆ. ಒಬ್ಬರಿಗೊಬ್ಬರು ಆಗದ ಮಮತಾ ಬ್ಯಾನರ್ಜಿ, ಸಿಪಿಐ, ಸಿಪಿಎಂ, ಅರವಿಂದ ಕೇಜ್ರಿವಾಲ…, ಕಾಂಗ್ರೆಸ್‌ ಸೇರಿ ವಿಪಕ್ಷಗಳು ಒಟ್ಟಾಗಿವೆ ಎಂದು ಹೇಳಿದರು.

ಮೈತ್ರಿ ವರಿಷ್ಠರಿಗೆ ಬಿಟ್ಟಿದ್ದು: ಬಿಎಸ್‌ವೈ
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಬುಧವಾರ ದಿಲ್ಲಿಗೆ ತೆರಳಲಿದ್ದು, ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಸದ್ಯದಲ್ಲೇ ಚುನಾವಣೆ ಎದುರಿಸುವ ರಾಜ್ಯಗಳ ಸಿದ್ಧತೆಗೆ ಸಂಬಂಧಪಟ್ಟಂತೆ ಈ ಸಭೆ ಆಯೋಜಿಸಲಾಗಿದೆ. ಚುನಾವಣ ಸಮಿತಿ ಸಭೆಗಾಗಿಯೇ ದಿಲ್ಲಿಗೆ ಹೋಗುತ್ತೇನೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಮೈತ್ರಿ ವಿಚಾರ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next