Advertisement

ನಗರದ ಸಮಸ್ಯೆಗಳ ವಿರುದ್ಧ ಬಿಜೆಪಿ ಸರಣಿ ಹೋರಾಟ

11:23 AM Sep 03, 2017 | Team Udayavani |

ಬೆಂಗಳೂರು: ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ರಸ್ತೆ ಮತ್ತು ಕಸದ ಸಮಸ್ಯೆ ಹಾಗೂ ರಾಜಕಾಲುವೆ ಒತ್ತುವರಿ ವಿರುದ್ಧ ಸರಣಿ ಹೋರಾಟ ಹಮ್ಮಿಕೊಳ್ಳಲು ಬೆಂಗಳೂರು ನಗರ ಜಿಲ್ಲಾ ಬಿಜೆಪಿ ನಿರ್ಣಯ ಕೈಗೊಂಡಿದೆ.

Advertisement

ಸಂಸದ ಪಿ.ಸಿ.ಮೋಹನ್‌ ಮತ್ತು ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪಿ.ಎನ್‌. ಸದಾಶಿವ ಅವರ ನೇತೃತ್ವದಲ್ಲಿ ಶನಿವಾರ ನಡೆದ ನಗರ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಕಳಪೆ ಕಾಮಗಾರಿ ಹಾಗೂ ನಿರ್ವಹಣೆ ಕೊರತೆಯಿಂದ ಇತ್ತೀಚಿನ ಮಳೆಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಓಡಾಡಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಕಸ ಸಮಸ್ಯೆ ಮತ್ತೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ರಾಜಕಾಲುವೆ ಒತ್ತುವರಿ ತೆರವು ನೆಪದಲ್ಲಿ ಬಡವರನ್ನು ಒಕ್ಕಲೆಬ್ಬಿಸಿದ ಪಾಲಿಕೆ ಅಧಿಕಾರಿಗಳು, ಶ್ರೀಮಂತರ ಕಟ್ಟಡಗಳನ್ನು ತೆರವುಗೊಳಿಸದೆ ಬಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇವೆಲ್ಲದರ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಬೆಂಗಳೂರಿಗೆ ಕಾವೇರಿ ನೀರು ಒದಗಿಸುವ ಕಾವೇರಿ 5ನೇ ಹಂತ, 2ನೇ ಘಟ್ಟದಡಿ ತ್ವರಿತವಾಗಿ 10 ಟಿಎಂಸಿ ನೀರು ತರಲು ಯೋಜನೆಯನ್ನು ಸರ್ಕಾರದ ವತಿಯಿಂದಲೇ ಕೈಗೊಂಡು ಸಮರೋಪಾದಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಮೇಯರ್‌ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸುಳ್ಳು ದಾಖಲೆ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿದ 8 ವಿಧಾನ ಪರಿಷತ್‌ ಸದಸ್ಯ ರನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ
ಕಾರ್ಯಕಾರಿಣಿ ಉದ್ಘಾಟಿಸಿದ ಸಂಸದ ಪಿ.ಸಿ.ಮೋಹನ್‌ ಮಾತನಾಡಿದರು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ವಿ. ಸೋಮಣ್ಣ, ಶಾಸಕ ಬಿ.ಎನ್‌.ವಿಜಯಕುಮಾರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಮುಖಂಡರಾದ ಸುಬ್ಬಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next