ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಅನಂತರ ಮೊದಲ ಬಾರಿಗೆ ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಸುತ್ತೂರು ಜಾತ್ರಾ ಮಹೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಹಾಗೂ ಗೆಲುವಿನ ರಣತಂತ್ರ ರೂಪಿಸುವ ಸಂಬಂಧ ಪಕ್ಷದ ಪ್ರಮುಖರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಫೆ. 9ರ ಶನಿವಾರ ಬೆಂಗಳೂರಿಗೆ ಬಂದಿಳಿಯಲಿರುವ ಶಾ ಇಡೀ ದಿನ ಪಕ್ಷದ ಮುಖಂಡರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಲಿದ್ದಾರೆ. ಈಗಾಗಲೇ ನಡೆಸಿರುವ ಸಮೀಕ್ಷಾ ವರದಿಗಳನ್ನು ಆಧರಿಸಿ ಅಭ್ಯರ್ಥಿ ಆಯ್ಕೆಯ ಚಿಂತನ-ಮಂಥನ ನಡೆಯಲಿದೆ.
ರಾಜ್ಯಸಭಾ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ. ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿಯೂ ತಮ್ಮನ್ನು ಬೆಂಬಲಿಸುವಂತೆ ಜೆಡಿಎಸ್ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇತ್ತ ಜಿ.ಎಸ್. ಬಸವರಾಜು, ಶ್ರೀನಿವಾಸಪ್ರಸಾದ್, ರಮೇಶ್ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ್ ಸಹಿತ ಹಲವು ಹಾಲಿ ಸಂಸದರು ಚುನಾವಣ ನಿವೃತ್ತಿ ಘೋಷಿಸಿದ್ದಾರೆ.
10-15 ಅಭ್ಯರ್ಥಿಗಳ ಪಟ್ಟಿ ಅಂತಿಮ?
ಹಾಲಿ ಸಂಸದರೆಲ್ಲರಿಗೂ ಟಿಕೆಟ್ ಸಿಗಲಿದೆಯೇ, ಅಚ್ಚರಿಯ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲಾಗುತ್ತದೆಯೇ ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಈ ಸಭೆಯಲ್ಲಿ ಬಹುತೇಕ ಉತ್ತರ ದೊರೆಯಲಿದೆ. ಅಷ್ಟೇ ಅಲ್ಲದೆ ಗೆಲ್ಲಬಲ್ಲ 10ರಿಂದ 15 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನೂ ಅಖೈರುಗೊಳಿಸುವ ಸಾಧ್ಯತೆ ಇದೆ.