Advertisement

ಬಿಜೆಪಿ ಬಣ ರಾಜಕೀಯ: ಪುಟ್ಟಸ್ವಾಮಿಗೆ ಘೇರಾವ್‌

12:11 PM Apr 29, 2017 | Team Udayavani |

ಮೈಸೂರು: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಮೈಸೂರಿನಲ್ಲೂ ಪ್ರತಿಧ್ವನಿಸಿದೆ. ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಪರಿಷತ್‌ ವಿರೋಧಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯುವ ಜತೆಗೆ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿಗೆ ಘೇರಾವ್‌ ಹಾಕಿದ ಪ್ರಸಂಗ ನಡೆಯಿತು.

Advertisement

ನಗರದ ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಪಾಲಿಕೆ ಸದಸ್ಯ ಬಿ.ಎಂ.ನಟರಾಜ್‌ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿ.ಜೆ.ಪುಟ್ಟಸ್ವಾಮಿ ಆಗಮಿಸಿದ್ದರು. ಈ ವೇಳೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಭಿನ್ನಮತದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಜೆ.ಪುಟ್ಟಸ್ವಾಮಿ, ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಲಾರಂಭಿಸಿದರು.

ಇದು ಸ್ಥಳದಲ್ಲಿದ್ದ ಈಶ್ವರಪ್ಪ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು, ಪುಟ್ಟಸ್ವಾಮಿ ಮಾತಿಗೆ ಅಡ್ಡಿಪಡಿಸಿದರು. ಬಿಜೆಪಿಯಲ್ಲಿನ ಭಿನ್ನಮತಕ್ಕೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಕಾರಣರಾಗಿದ್ದು, ಪುಟ್ಟಸ್ವಾಮಿ ಕೇವಲ ಒಬ್ಬರ ಪರವಾಗಿ ಮಾತನಾಡುವುದು ಸರಿಯಲ್ಲ.

ಬದಲಿಗೆ ಪಕ್ಷದ ಪರವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಬಗ್ಗೆ ಮಾತನಾಡಿ ಎಂದು ನರೇಂದ್ರ ಮೋದಿ, ಅಟಲ್‌ ಬಿಹಾರಿ ವಾಜಪೇಯಿ ಅವರ ಪರವಾಗಿ ಜೈಕಾರಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಇದರ ಪರಿಣಾಮ ಸ್ಥಳದಲ್ಲಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಈ ನಡುವೆ ಸ್ಥಳದಲ್ಲಿದ್ದ ಕೆಲವು ಕಾರ್ಯಕರ್ತರು ಬಿಎಸ್‌ವೈ ಪರವಾಗಿ ಹಾಗೂ ಮತ್ತೆ ಕೆಲವರು ಈಶ್ವರಪ್ಪಗೆ ಜೈಕಾರ ಹಾಕುತ್ತಿದ್ದರು. ಇದರಿಂದಾಗಿ ಬಿಜೆಪಿ ಕಚೇರಿ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟರಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಬಿಜೆಪಿಯ ಕೆಲವು ಮುಖಂಡರುಗಳು ಕಾರ್ಯಕರ್ತರನ್ನು ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next